Thursday, January 2, 2025
Homeರಾಜ್ಯಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಒಂದು ವಾರ ನಡೆದದ್ದೇನು..? ಚರ್ಚೆಯಾಗಿದ್ದೆಷ್ಟು..?

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಒಂದು ವಾರ ನಡೆದದ್ದೇನು..? ಚರ್ಚೆಯಾಗಿದ್ದೆಷ್ಟು..?

What happened in the one week of the Belgaum Winter Session?

ಬೆಳಗಾವಿ,ಡಿ.14- ಬಹುನಿರೀಕ್ಷಿತ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಿದ್ದು, ಮೊದಲ ವಾರದ ಕಾರ್ಯಕಲಾಪಗಳು ಮುಗಿದಿವೆ. ಪಂಚಮಸಾಲಿ ಮೀಸಲಾತಿ ಹೋರಾಟ, ರೈತರ ಜಮೀನು, ಮಠಮಾನ್ಯಗಳ ಆಸ್ತಿಯ ಪಹಣಿಯಲ್ಲಿ ವಕ್ಫ್ ಮಂಡಳಿಯ ಹೆಸರು ನಮೂದಾಗಿದೆ ಎಂಬ ಆರೋಪ, ಮಾಜಿ ಮುಖ್ಯಮಂತ್ರಿ ಎಸ್‌‍.ಎಂ.ಕೃಷ್ಣ, ಉದ್ಯಮಿ ರತನ್‌ ಟಾಟಾ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಕೆ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾಗಿದ್ದವು.

ಅಧಿವೇಶನದ ಆರಂಭದ ಮೊದಲ ದಿನ ಮಾಜಿ ಉಪಸಭಾಪತಿ ಮನೋಹರ್‌ ತಹಸೀಲ್ದಾರ್‌, ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್‌‍, ಉದ್ಯಮಿ ರತನ್‌ ಟಾಟಾ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಗಿತ್ತು. ಅಂದು ವಿಧಾನಸಭೆ ಸಭಾಂಗಣದಲ್ಲಿ ನಿರ್ಮಿಸಲಾಗಿರುವ ವಿಧಾನಸಭಾಧ್ಯಕ್ಷರ ಪೀಠದ ವೈಶಿಷ್ಟ್ಯತೆಯ ವಿಚಾರವೂ ಚರ್ಚೆಯಾಗಿ ಅದಕ್ಕಾ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ವಿಧಾನಸಭೆಯಲ್ಲಿ ಅಭಿನಂದಿಸಲಾಯಿತು.

ಅಂದು ವಕ್ಫ್ ವಿಚಾರ ಪ್ರಸ್ತಾಪವಾದರೂ ಚರ್ಚೆಗೆ ಬರಲಿಲ್ಲ. ಮರುದಿನ ಮಂಗಳವಾರ ಮಾಜಿ ಮುಖ್ಯಮಂತ್ರಿ ಎಸ್‌‍.ಎಂ.ಕೃಷ್ಣ ಅವರು ನಿಧನರಾದ ಹಿನ್ನಲೆಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಸಂತಾಪ ಸೂಚಿಸಿ ಬೇರೆ ಯಾವುದೇ ಕಲಾಪವನ್ನು ನಡೆಸಿರಲಿಲ್ಲ.

ಮೂರನೇ ದಿನವಾದ ಬುಧವಾರ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿತ್ತು. ನಾಲ್ಕನೇ ದಿನವಾದ ಗುರುವಾರವೂ ಆರಂಭದಲ್ಲಿ ಸಂತಾಪ ಸೂಚನೆ ನಡೆಯಿತು.

ಎಸ್‌‍.ಎಂ.ಕೃಷ್ಣ, ವಿಧಾನಸಭೆ ಮಾಜಿ ಸದಸ್ಯರಾಗಿದ್ದ ಆರ್‌.ನಾರಾಯಣ್‌ ಮತ್ತು ಜಯಣ್ಣ.ಎಸ್‌‍ ಅವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್‌ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು.

ಲಾಠಿ ಚಾರ್ಜ್‌ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿತ್ತಾದರೂ ನಿರೀಕ್ಷಿತ ಫಲ ದೊರೆಯಲಿಲ್ಲ. ಲಾಠಿ ಚಾರ್ಜ್‌ ಮಾಡಲೇಬೇಕಾದ ಅನಿವಾರ್ಯತೆಯನ್ನು ಸರ್ಕಾರ ಸಕಾರಣ ನೀಡಿ ಸಮರ್ಥನೆ ಮಾಡಿಕೊಂಡಿತು.

ಅಂದು ಸಂಜೆ ವೇಳೆಗೆ 11 ಪ್ರಮುಖ ವಿಧೇಯಕಗಳು ಹಾಗೂ ವಿವಿಧ ವರದಿಗಳು ಮಂಡನೆಯಾಗಿ ಪ್ರಶ್ನೋತ್ತರ ಕಲಾಪವು ನಡೆಯಿತ್ತಲ್ಲದೆ ರಾತ್ರಿ 10 ಗಂಟೆವರೆಗೂ ಕಲಾಪ ನಡೆಯಿತು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ, ವಾಗ್ವಾದ, ಪ್ರತಿಪಕ್ಷಗಳ ಸಭಾತ್ಯಾಗ ಹೊರತುಪಡಿಸಿದರೆ ಈ ವಾರ ಕಲಾಪ ಸುಸೂತ್ರವಾಗಿಯೇ ನಡೆಯಿತು.
ಪ್ರಶ್ನೋತ್ತರ ಕಲಾಪ , ಶೂನ್ಯವೇಳೆ ಹಾಗೂ ಗಮನಸೆಳೆಯುವ ಸೂಚನೆಗಳ ಮೂಲಕ ಶಾಸಕರು ತಮ ತಮ ಕ್ಷೇತ್ರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದಿಂದ ಪರಿಹಾರ ಪಡೆಯುವ ಪ್ರಯತ್ನ ಮಾಡಿದರು.

ಈ ವಾರದ ಕೊನೆಯ ದಿನವಾದ ನಿನ್ನೆ ವಕ್ಫ್ ನೋಟಿಸ್‌‍ ವಿಚಾರದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳು ಸುಧೀರ್ಘ ಚರ್ಚೆ ನಡೆಸಿ ನೋಟಿಸ್‌‍ನಿಂದ ಪರಿಣಾಮಗಳ ಬಗ್ಗೆಯೂ ಬೆಳಕು ಚೆಲ್ಲಲಾಯಿತು.

ಈಗಾಗಲೇ ಮೇಲನೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ಆರಂಭಗೊಂಡಿದೆ. ಆದರೆ ಮೊದಲ ವಾರದಲ್ಲಿ ವಿಧಾನಸಭೆಯಲ್ಲಿ ಆ ರೀತಿಯ ಚರ್ಚೆಗೆ ಅವಕಾಶ ದೊರೆಯಲಿಲ್ಲ. ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಕುರಿತು ವಿಶೇಷ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

ಹಿಂಗಾರು ಹಾಗೂ ಮುಂಗಾರಿನಿಂದ ಉಂಟಾಗಿರುವ ಅನಾಹುತ, ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು, ಮಳೆ ಅನಾಹುತ ತಡೆಗೆ ಕೈಗೊಳ್ಳಲಿರುವ ಶಾಶ್ವತ ಪರಿಹಾರಗಳ ಕುರಿತ ಹೇಳಿಕೆಯನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ನೀಡಿದ್ದಾರೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ಚಳಿಗಾಲದ ಅಧಿವೇಶನದಲ್ಲಿ ಜ್ವಲಂತ ಸಮಸ್ಯೆಗಳು ಚರ್ಚೆಯಾಗಿ ಪರಿಹಾರ ಸಿಗಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮುಂಭಾಗದಲ್ಲಿ ವಿವಿಧ ಸಂಘಟನೆಗಳು, ಪ್ರತಿನಿತ್ಯ ತಮ ತಮ ಬೇಡಿಕೆಗಳ ಈಡೇರಿಕೆ, ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದವು.

ಹತ್ತು ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನದಲ್ಲಿ ಈಗಾಗಲೇ ಒಂದು ದಿನ ಕಡಿತವಾಗಿದೆ. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಹಿನ್ನೆಲೆಯಲ್ಲಿ ಮತ್ತೊಂದು ದಿನ ಮೊಟಕುಗೊಳಿಸುವ ತೀರ್ಮಾನ ಮಾಡಲಾಗಿದ್ದು, ಈ ಬಾರಿಯ ಅಧಿವೇಶನ ಎಂಟು ದಿನಕ್ಕೆ ಸೀಮಿತಗೊಳ್ಳುವ ಸಾಧ್ಯತೆಗಳಿವೆ.

ಪ್ರತಿಪಕ್ಷಗಳು ಸದನದ ಹೊರಗೆ ಭ್ರಷ್ಟಾಚಾರ, ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದಿರುವುದು, ಬಾಣಂತಿಯರ ಸಾವು ಪ್ರಕರಣ ಮೊದಲಾದ ವಿಚಾರಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಈ ವಿಚಾರಗಳು ಕೂಡ ಸೋಮವಾರದಿಂದ ನಡೆಯುವ ಕಲಾಪದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.

RELATED ARTICLES

Latest News