ಬೆಂಗಳೂರು,ಜು.5- ಹಾಸನ ಜಿಲ್ಲೆಯಲ್ಲಾಗುತ್ತಿರುವ ಅಸಹಜ ಸಾವುಗಳ ಬಗ್ಗೆ ನಿಖರ ಕಾರಣ ತಿಳಿಯಲು ಗಂಭೀರ ಪ್ರಯತ್ನಗಳನ್ನು ಆರಂಭಿಸಿರುವ ಸರ್ಕಾರ ಸಂಸ್ಕಾರಗೊಂಡ ಶವಗಳ ಮರುಪರೀಕ್ಷೆಯ ಸಾಧ್ಯತೆಗಳ ಬಗ್ಗೆ ಕೂಡ ಪರಿಶೀಲನೆ ನಡೆಸುತ್ತಿದೆ.ಸರಣಿ ಹೃದಯಾಘಾತದ ಕಾರಣಗಳನ್ನು ಪತ್ತೆ ಹಚ್ಚಲು ಹಾಸನ ಜಿಲ್ಲಾಡಳಿತ ಕೈಗೊಂಡಿರುವ ಸ್ಥಳೀಯ ಅಧ್ಯಯನದ ವರದಿ ಇಂದು ಜಿಲ್ಲಾಧಿಕಾರಿಗಳ ಕೈ ಸೇರಲಿದೆ.
ಹಾಸನ ಜಿಲ್ಲೆಯೊಂದರಲ್ಲಿ 40 ದಿನಗಳ ಅಂತರದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಅಸಹಜವಾದ ಹೃದಯಾಘಾತದಿಂದ ಮೃತಪಟ್ಟಿರುವುದು ರಾಜ್ಯವನ್ನು ಬೆಚ್ಚಿಬೀಳುವಂತೆ ಮಾಡಿದೆ. ಇದರ ಬಗ್ಗೆ ಜನಸಾಮಾನ್ಯರಲ್ಲಿನ ದುಗುಡಗಳು ತೀವ್ರಗೊಂಡಿವೆ.
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ತಜ್ಞರನ್ನೊಳಗೊಂಡ ಉನ್ನತ ಸಮಿತಿಯನ್ನು ರಚಿಸಿದೆ.
ಸಮಿತಿ ಸೋಮವಾರ ಹಾಸನ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಅದಕ್ಕೆ ಪೂರ್ವಭಾವಿಯಾಗಿ ಹಾಸನ ಜಿಲ್ಲಾಧಿಕಾರಿಯವರು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕರು, ಹೃದ್ರೋಗ ವಿಭಾಗದ ಮುಖ್ಯಸ್ಥರು, ಹೃದ್ರೋಗ ತಜ್ಞರು ಹಾಗೂ ಇತರರ ತಂಡವೊಂದನ್ನು ರಚಿಸಿದ್ದಾರೆ.
ಈ ತಂಡ ಮನೆಮನೆಗೆ ಭೇಟಿ ನೀಡಿ ಮೃತಪಟ್ಟವರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದೆ. ಅಸಹಜ ಸಾವಿಗೀಡಾದವರಿಗೆ ಧೂಮಪಾನ, ಮಧ್ಯಪಾನದಂತಹ ಅಭ್ಯಾಸಗಳಿದ್ದವೇ?, ಈ ಹಿಂದೆ ಎಂದಾದರೂ ಅವರಿಗೆ ಹೃದಯಾಘಾತವಾಗಿತ್ತೇ?, ಕುಟುಂಬದ ಹಿನ್ನೆಲೆಯಲ್ಲಿ ಹೃದಯಾಘಾತಗಳಾದ ಹಿನ್ನೆಲೆಗಳಿವೆಯೇ? ಎಂಬೆಲ್ಲಾ ವಿಚಾರಗಳನ್ನು ಸಂಗ್ರಹಿಸಿದ್ದಾರೆ.
ನಿಗದಿತ ಪ್ರಶ್ನಾವಳಿ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಾಗಿದ್ದು, ಅದನ್ನು ಇಂದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವ ಸಾಧ್ಯತೆಯಿದೆ. ಆ ವರದಿ ರಾಜ್ಯಮಟ್ಟದ ತಜ್ಞರ ಸಮಿತಿಗೆ ರವಾನೆಯಾಗಲಿದೆ.ಪ್ರಾಥಮಿಕ ಅಧ್ಯಯನದ ವರದಿಯ ಬಳಿಕ ವರದಿಯನ್ನು ಪರಿಶೀಲಿಸಿ ತಜ್ಞರ ಸಮಿತಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮತ್ತಷ್ಟು ಪರಿಶೀಲನೆ ನಡೆಸಲಿವೆ. ಈ ಮೂಲಕ ಹೃದಯಾಘಾತಕ್ಕೆ ಕಾರಣಗಳೇನು ಎಂದು ಪತ್ತೆಹಚ್ಚುವ ಪ್ರಯತ್ನ ನಡೆದಿದೆ.
ಕೆಲವು ಪ್ರಕರಣಗಳಲ್ಲಿ ಮನೆ ಅಥವಾ ಕಚೇರಿಗಳಲ್ಲೇ ಸಾವುಗಳಾಗಿದ್ದು, ಶವಪರೀಕ್ಷೆಯನ್ನೂ ಕೂಡ ನಡೆಸಿಲ್ಲ ಎನ್ನಲಾಗುತ್ತಿದೆ. ಹೃದಯಾಘಾತ ಹಾಗೂ ಅಸಹಜ ಸಾವಿಗೆ ನಿಖರ ಕಾರಣ ತಿಳಿಯಬೇಕಾದರೆ ಶವಪರೀಕ್ಷೆ ಅನಿವಾರ್ಯ ಎಂಬ ಅಭಿಪ್ರಾಯಗಳಿವೆ.ಕುಟುಂಬದ ಸಹಮತಿ ಪಡೆದು ಸಂಸ್ಕಾರಗೊಂಡಿರುವ ಶವಗಳನ್ನು ಹೊರತೆಗೆದು ಶವಪರೀಕ್ಷೆ ನಡೆಸುವ ಸಾಧ್ಯತೆಗಳ ಬಗ್ಗೆ ಕೂಡ ಪರಿಶೀಲನೆ ನಡೆಯುತ್ತಿದೆ.
ಅಸಹಜವಾದ ಸಾವುಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಇದರ ಕಾರಣ ಪತ್ತೆ ಹಚ್ಚಲು ತಜ್ಞರ ಸಮಿತಿ ಮುಂದಾಗಿದೆ.ಒಂದೆಡೆ ಜೀವನಶೈಲಿ, ಆಹಾರದ ಪದ್ಧತಿ, ಪರ್ಯಾಯ ಧೂಮಪಾನ, ಮಾಲಿನ್ಯ ವಾತಾವರಣ, ಕೋವಿಡ್ ಸೋಂಕು, ಕೋವಿಡ್ ಲಸಿಕೆ ಸೇರಿದಂತೆ ಹಲವಾರು ಅನುಮಾನಗಳು ಚರ್ಚೆಯಲ್ಲಿದ್ದು, ಪ್ರತಿಯೊಂದು ಪ್ರಕರಣದಲ್ಲೂ ನಿಖರ ಕಾರಣಗಳನ್ನು ಪತ್ತೆಹಚ್ಚುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ತಜ್ಞರ ಸಮಿತಿ ಮುಂದಾಗಿದೆ.
- ಸಪ್ತ ಸಾಗರದಾಚೆ ಕನ್ನಡನಾಡಿನ ಒಕ್ಕಲಿಗ ಸಂಸ್ಕೃತಿ-ಪರಂಪರೆಯ ಅದ್ಭುತ ಪ್ರದರ್ಶನ
- ಮಂಗಳೂರು : ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದ ಬಿಜೆಪಿ ಮುಖಂಡನ ಪುತ್ರ ಅರೆಸ್ಟ್
- ಆರೋಪಿಯ ವಿಚಾರಣೆ ವೇಳೆ ರಾಜಕೀಯ ನಾಯಕರ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ
- ಪ್ರೀತಿ ವಿಷಯಕ್ಕೆ ಶಿಕ್ಷಕಿಯನ್ನು ಇರಿದು ಕೊಂದ ಯುವಕ
- ಲವ್ ಜಿಹಾದ್ ಮಾಸ್ಟರ್ ಮೈಂಡ್ ಕಾಂಗ್ರೆಸ್ ಕೌನ್ಸಿಲರ್ ವಿರುದ್ಧ ಪ್ರಕರಣ ದಾಖಲು