ಬೆಂಗಳೂರು, ಮಾ.2- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಾಕತ್ತಿದ್ದರೆ ಸಸ್ಪೆಂಡ್ ಮಾಡಿ ಎಂದು ಹೇಳುವ ನೈತಿಕತೆ ನಿಮಗೇನಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಆರ್.ಅಶೋಕ್ ವಿರುದ್ಧ ಕಿಡಿಕಾರಿದ್ದಾರೆ.
ಮೊದಲು ನಿಮ್ಮ ಪಕ್ಷದಲ್ಲಿ ನಿಮ್ಮನ್ನು ಹಾಗೂ ವಿಜಯೇಂದ್ರ ಅವರನ್ನು ಅಮಾನತು ಮಾಡಿ ಎಂದು ನಿಮ್ಮದೇ ಮುಖಂಡರು ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಅವರ ಬಗ್ಗೆ ಗಮನ ಕೊಟ್ಟು ಮೊದಲು ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ. ಆಮೇಲೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಬಿಜೆಪಿಗೆ ಸಿಂಹಸ್ವಪ್ನವಾಗಿದ್ದಾರೆ. ಸಿದ್ದರಾಮಯ್ಯನವರ ಆಡಳಿತದಿಂದ ಡಿ.ಕೆ.ಶಿವಕುಮಾರ್ ಅವರ ಸಂಘಟನಾತ್ಮಕ ಶಕ್ತಿಯಿಂದ ಬಿಜೆಪಿ ರಾಜ್ಯದಲ್ಲಿನೆಲ ಕಚ್ಚಿದೆ. ಕಳೆದ ಮೂರು ಉಪಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರತಿನಿತ್ಯ ಯತ್ನಾಳ್ ತಂಡದವರು ನಿಮ್ಮನ್ನು, ವಿಜಯೇಂದ್ರ ಅವರನ್ನು ಬಿಜೆಪಿಯಿಂದ ಒದ್ದು ಓಡಿಸಿ ಎಂದು ಅರಚಾಡುತ್ತಿದ್ದಾರೆ. ನಿಮ್ಮ ಭ್ರಷ್ಟಾಚಾರವನ್ನು ಪ್ರತಿನಿತ್ಯ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಅದಕ್ಕೆ ಮೊದಲು ಉತ್ತರ ಕೊಡಿ. ಡಿ.ಕೆ.ಶಿವಕುಮಾರ್‌ರವರು ಕಾಂಗ್ರೆಸ್‌ನ ಪಕ್ಷನಿಷ್ಠ ನಾಯಕರು.
ಅವರ ಬಗ್ಗೆ ಅನಗತ್ಯವಾಗಿ ಮಾತನಾಡುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ಹೇಳಿರುವ ಅವರು, ನಿಮ್ಮ ಪಕ್ಷದಲ್ಲಿರುವ ಬೀದಿಕಿತ್ತಾಟ ನಾಟಕವನ್ನು ಮೊದಲು ಸರಿಪಡಿಸಿಕೊಳ್ಳಿ. ರೇಣುಕಾಚಾರ್ಯ, ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರ ಬಗ್ಗೆ ಗಮನ ಹರಿಸಿ ಎಂದು ಹೇಳಿದ್ದಾರೆ.