Monday, May 5, 2025
Homeರಾಷ್ಟ್ರೀಯ | Nationalದೇಶದ ಜನ ಬಯಸಿದ್ದೆಲ್ಲವೂ ಪ್ರಧಾನಿ ಮೋದಿ ನಾಯಕತ್ವದಲ್ಲಿ ಆಗುತ್ತದೆ : ರಾಜನಾಥ್ ಸಿಂಗ್

ದೇಶದ ಜನ ಬಯಸಿದ್ದೆಲ್ಲವೂ ಪ್ರಧಾನಿ ಮೋದಿ ನಾಯಕತ್ವದಲ್ಲಿ ಆಗುತ್ತದೆ : ರಾಜನಾಥ್ ಸಿಂಗ್

"What You Desire Will Happen": Rajnath Singh's Big Hint Amid Tension With Pak

ನವದೆಹಲಿ – ದೇಶದ ಜನ ಬಯಸಿದ್ದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆಗುತ್ತದೆ. ಅವರ ನೇತೃತ್ವದಲ್ಲಿ ಪಹಲ್ಗಾಮ್ ದಾಳಿಗೆ ಉತ್ತರವಾಗಿ ಜನ ಬಯಸಿದಂತೆ ಖಂಡಿತವಾಗಿಯೂ ನಡೆಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಸುಳಿವು ನೀಡಿದ್ದಾರೆ.

ಏಪ್ರಿಲ್ 22ರಂದು ಪಹಲ್ಯಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ. ನವದೆಹಲಿಯಲ್ಲಿ ನಡೆದ ಸಂಸ್ಕೃತಿ ಜಾಗರಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುವ ಭಾರತದ ದೃಢಸಂಕಲ್ಪದ ಬಗ್ಗೆ ಒತ್ತಿ ಹೇಳಿದರು.

ಭಾರತದ ಮೇಲೆ ಕೆಟ್ಟ ಕಣ್ಣು ಹಾಕುವವರಿಗೆ ಸೂಕ್ತ ಉತ್ತರ ನೀಡುವುದು ಮತ್ತು ಸಶಸ್ತ್ರ ಪಡೆಗಳೊಂದಿಗೆ ಕೆಲಸ ಮಾಡುವುದು ತಮ್ಮ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ನೀತಿ ಹಾಗೂ ಪರಿಶ್ರಮ, ಕ್ಷಮತೆ ಮತ್ತು ದೃಢ ಸಂಕಲ್ಪದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅವರು ತಮ್ಮ ಜೀವನದಲ್ಲಿ ಅಪಾಯಗಳನ್ನು ಸ್ವೀಕರಿಸಲು ಕಲಿತ ರೀತಿ ನಿಮಗೆಲ್ಲ ಗೊತ್ತು. ಹಾಗಾಗಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ನೀವು ಏನನ್ನು ಬಯಸಿದ್ದೀರೋ, ಅದು ಖಂಡಿತವಾಗಿಯೂ ನೆರವೇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ತಿಳಿಸಿದರು.

ರಕ್ಷಣಾ ಸಚಿವನಾಗಿ ನನ್ನ ಸೈನಿಕರೊಂದಿಗೆ ನಿಕಟವಾಗಿ ಕೆಲಸ ಮಾಡುವುದು ಮತ್ತು ದೇಶದ ಗಡಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನಮ್ಮ ದೇಶದ ಮೇಲೆ ದುಷ್ಟ ಉದ್ದೇಶ ಹೊಂದಿರುವವರಿಗೆ ತಕ್ಕ ಉತ್ತರ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಸಶಸ್ತ್ರ ಪಡೆಗಳೊಂದಿಗೆ ಕೈಜೋಡಿಸುವುದು ನನ್ನ ಜವಾಬ್ದಾರಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ದ ಭಾರತದ ಪ್ರತೀಕಾರದ ಕ್ರಮದ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ರಕ್ಷಣಾ ಅಧಿಕಾರಿಗಳಿಗೆ ತಿಳಿಸಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೂರು ಸೇವೆಗಳ ಮುಖ್ಯಸ್ಥರು ಸೇರಿದಂತೆ ಉನ್ನತ ರಕ್ಷಣಾ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದರು. ಸಭೆಯಲ್ಲಿ ಮೋದಿ ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡುವುದು ನಮ್ಮ ರಾಷ್ಟ್ರೀಯ ಸಂಕಲ್ಪ ಎಂದು ಹೇಳಿದರು. ಸಶಸ್ತ್ರ ಪಡೆಗಳ ಸಾಮರ್ಥ್ಯದ ಬಗ್ಗೆ ಪ್ರಧಾನಿಯವರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದರು.

ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಕಾರಣರಾದ ಭಯೋತ್ಪಾದಕರು ಮತ್ತು ಅದರ ಹಿಂದಿರುವ ರೂವಾರಿಗಳು ಅವರ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಯೋತ್ಪಾದನೆಯ ಉಳಿದ ಭದ್ರಕೋಟೆಗಳನ್ನು ನಿರ್ಮೂಲನೆ ಮಾಡುವ ಸಮಯ ಬಂದಿದೆ ಮತ್ತು 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಯ ಅಪರಾಧಿಗಳ ಬೆನ್ನೆಲುಬು ಮುರಿಯಲು ಸಿದ್ದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭರವಸೆ ನೀಡಿದ್ದರು.

ಕಳೆದ ಹತ್ತು ದಿನಗಳಿಂದ ಐಎಲ್‌ಎ ಅಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಭದ್ರತಾ ಪಡೆಗಳು ಪ್ರತ್ಯುತ್ತರವಾಗಿ ಪಾಕ್ ಸೇನೆ ಮೇಲೆ ಗುಂಡಿನ ದಾಳಿ ನಡೆಸಿವೆ. ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರ ಹಾಕಲಾಗುತ್ತಿದೆ. ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದು ಪಾಕಿಸ್ತಾನಕ್ಕೆ ಭಾರತ ದೊಡ್ಡ ಶಾಕ್ ನೀಡಿದೆ.

ಭಾರತೀಯ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ಆಟ್ಟಾರಿ ವಾಘಾ ಗಡಿಯನ್ನು ಮುಚ್ಚಿದ್ದು, ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಭಾರತೀಯ ಅಂಚೆ ಸೇವೆಯನ್ನು ಪಾಕಿಸ್ತಾನದಲ್ಲಿ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

RELATED ARTICLES

Latest News