ಮೈಸೂರು, ಸೆ.2- ಧರ್ಮಸ್ಥಳ ಯಾತ್ರೆ ಸೇರಿದಂತೆ ಬಿಜೆಪಿಯವರು ನಡೆಸುತ್ತಿರುವ ಎಲ್ಲಾ ಚಟುವಟಿಕೆಗಳಿಗೆ ಹೊರಗಿನಿಂದ ದುಡ್ಡು ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಗೆ ಇಷ್ಟೆಲ್ಲಾ ಚಟುವಟಿಕೆ ಮಾಡಲು ಯಾರು ದುಡ್ಡು ಕೊಡುತ್ತಿದ್ದಾರೆ? ಎಲ್ಲಿಂದ ಹಣ ಬರುತ್ತಿದೆ? ಎಂದು ಪ್ರಶ್ನಿಸಿದರು.
ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ವಿರೋಧ ಪಕ್ಷಗಳು ಎಲ್ಲವನ್ನೂ ಟೀಕೆ ಮಾಡುವುದು, ರಾಜಕೀಯಕ್ಕೆ ಬಳಸುವುದು ಒಳ್ಳೆಯದಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೌಜನ್ಯ ಪ್ರಕರಣದಲ್ಲಿ ಯಾರ ಮೇಲೆ ಆರೋಪ ಕೇಳಿ ಬರುತ್ತಿದೆ ಎಂಬುವುದು ಗೊತ್ತಿದೆಯಲ್ಲವೇ? ಬಿಜೆಪಿಯವರು ಯಾರ ಪರವಾಗಿ ಇದ್ದಾರೆ. ಒಂದು ಕಡೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಪರ ಎಂದು ಹೇಳುತ್ತಾರೆ, ಮತ್ತೊಂದು ಕಡೆ ಸೌಜನ್ಯ ಪ್ರಕರಣ ತನಿಖೆಯಾಗಬೇಕು ಎನ್ನುತ್ತಾರೆ ಎಂದು ಆಕ್ಷೇಪಿಸಿದರು.
ಸಿಬಿಐ ಕೇಂದ್ರ ಸರ್ಕಾರ ಅಧೀನದಲ್ಲಿದೆ. ಸಿಬಿಐ ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ನಾನು ನೋಡಿಲ್ಲ. ತೀರ್ಪನ್ನು ಪ್ರಶ್ನಿಸಿ ಮೇಲನವಿ ಸಲ್ಲಿಸುವುದು ಸೌಜನ್ಯ ಅವರ ತಾಯಿಗೆ ಸೇರಿದ ವಿಚಾರ. ಒಂದು ಕಡೆ ಬಿಜೆಪಿಯವರು ವೀರೇಂದ್ರ ಹೆಗ್ಗಡೆ ಅವರಿಗೆ ಜೈಕಾರ ಹಾಕುತ್ತಾರೆ, ಮತ್ತೊಂದು ಕಡೆ ಸೌಜನ್ಯ ಪ್ರಕರಣವನ್ನೂ ಎತ್ತಿ ಕಟ್ಟುತ್ತಿದ್ದಾರೆ ಎಂದು ಕಿಡಿ ಕಾರಿದರು.
12 ವರ್ಷದ ಹಿಂದೆ ಸೌಜನ್ಯ ಅಪಹರಣವನ್ನು ಕಣ್ಣಾರೆ ಕಂಡಿದ್ದೇನೆ ಎಂದು ಈಗ ಸಾಕ್ಷ್ಯ ಹೇಳುತ್ತಿರುವ ಮಹಿಳೆ ಈ ಹಿಂದೆ ಸಿಬಿಐ ತನಿಖೆಯ ವೇಳೆ ಏಕೆ ವಿಷಯ ತಿಳಿಸಲಿಲ್ಲ. ಸಾಕ್ಷ್ಯವನ್ನೂ ಮುಚ್ಚಿಡುವುದು ಕೂಡ ಅಪರಾಧವೆಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರು ಧರ್ಮಸ್ಥಳಕ್ಕೆ ನಡೆಸುತ್ತಿರುವ ಜಾಥಾ ಧರ್ಮಯಾತ್ರೆಯಲ್ಲ, ರಾಜಕೀಯ ಯಾತ್ರೆ. ಈಗಾಗಲೇ ಎಸ್‌ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರಿಗೆ ನಮ ಪೊಲೀಸರ ಮೇಲೆ ನಂಬಿಕೆಯಿಲ್ಲ. ಎನ್‌ಐಎ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ತನಿಖೆ ಮಾಡುವುದು ನಮ ಪೊಲೀಸರೇ ಅಲ್ಲವೇ? ಎಂದು ಪ್ರಶ್ನಿಸಿದರು.
ಆರಂಭದಲ್ಲಿ ತನಿಖೆಮಾಡಿ ಎಂದು ಬಿಜೆಪಿಯವರು ಕೇಳಿರಲಿಲ್ಲ. ಧರ್ಮಸ್ಥಳದಲ್ಲಿ ಶವಗಳು ಪತ್ತೆಯಾಗದ ನಂತರ ತನಿಖೆಗೆ ಕೇಳುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ತನಿಖೆಯನ್ನು ಸ್ವಾಗತಿಸಿದ್ದಾರೆ. ಯಾರ ಮೇಲೆ ದೂರು ಇದೆಯೋ ಆ ವ್ಯಕ್ತಿ ತನಿಖೆಯಾಗಲಿ ಜನರಿಗೆ ಸತ್ಯ ತಿಳಿಯಲಿ. ನಮ ಮೇಲಿರುವ ಅನುಮಾನದ ತೂಗುಗತ್ತಿ ಪರಿಹಾರವಾಗಲಿ ಎನ್ನುತ್ತಿದ್ದಾರೆ. ಅದರಂತೆ ತನಿಖೆ ನಡೆಯುತ್ತಿದೆ. ನಾವು ಹಸ್ತಕ್ಷೇಪ ಮಾಡುತಿಲ್ಲ. ಸ್ವತಂತ್ರವಾಗಿ ತನಿಖೆ ನಡೆಯುತ್ತಿದೆ. ಸತ್ಯ ಹೊರ ಬರಲಿ ಎಂದರು.
ಚಿನ್ನಯ್ಯನನ್ನು ಕರೆ ತಂದಿದ್ದೆ ಕಾಂಗ್ರೆಸ್‌ನವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನೀಡಿರುವ ಹೇಳಿಕೆಗಳು ಗಂಭೀರವಾದುದ್ದಲ್ಲ. ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅಶೋಕ್ ಮತ್ತು ವಿ. ಸುನೀಲ್ ಕುಮಾರ್ ಅವರು ಏನೆಲ್ಲಾ ಹೇಳಿದ್ದಾರೆ ಎಂದು ದಾಖಲೆಗಳಿವೆ. ಅಸತ್ಯದ ಮೇಲೆ ಚರ್ಚೆಮಾಡಿದರೆ ಹೀಗೆ ಹಾಸ್ಯಾಸ್ಪದಕ್ಕೆ ಈಡಾಗುತ್ತಾರೆ ಎಂದರು.
ಬಾನುಮುಷ್ತಾಕ್ ಅರಿಶಿನ, ಕುಂಕುಮದ ಬಗ್ಗೆ ಏನೂ ಮಾತನಾಡಿದರೋ ನನಗೆ ಗೊತ್ತಿಲ್ಲ. ಅದು ಬೇರೆ ವಿಚಾರ. ಕನ್ನಡದ ಮೇಲೆ ಪ್ರೀತಿ ಇಲ್ಲದೇ ಇದ್ದರೇ ಅವರು ಆ ಭಾಷೆಯಲ್ಲಿ ಬರೆಯಲು ಸಾಧ್ಯವೇ? ಅವರು ಬರೆದಿರುವ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಸಿಕ್ಕಿಲ್ಲವೇ? ಎಂದು ಪ್ರಶ್ನಿಸಿದರು. ಬಾನುಮುಷ್ತಾಕ್ ಮುಸ್ಲಿಂ ಧರ್ಮದದ ಮಹಿಳೆ. ದಸರಾ ನಾಡ ಹಬ್ಬ. ಕುಂಕುಮ ಹಾಕುವ ಸಂಪ್ರದಾಯ ಅವರ ಧರ್ಮದಲ್ಲಿ ಇಲ್ಲ. ದಸರಾ ಉದ್ಘಾಟನೆಗೆ ಬರುವಾಗ ಕುಂಕುಮ ಹಾಕಿಕೊಂಡು ಬನ್ನಿ, ಹಿಂದೂಗಳಾಗಿ ಪರಿವರ್ತನೆಯಾಗಿ ಎಂದರೆ ಅದು ಸರಿಹೋಗುತ್ತದೆಯೇ? ಎಂದು ಪ್ರಶ್ನಿಸಿದರು.ಬಾನುಮುಷ್ತಾಕ್ ವಿರುದ್ಧ ಯಾವುದೇ ಸತ್ವ ಹೊರಡಿಸಿಲ್ಲ ಎಂದು ಧಾರ್ಮಿಕ ಗುರುಗಳು ಸ್ಪಷ್ಟಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.