ಮೈಸೂರು,ಸೆ.25- ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಇಡೀ ನಗರ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದರೆ ಇತ್ತ ಮೈಸೂರಿನ ಅರಮನೆಗಳಲ್ಲಿ ಒಂದಾದ ಪ್ರಖ್ಯಾತ ಜಗನೋಹನ ಅರಮನೆ ಮಾತ್ರ ಕಗ್ಗತ್ತಲಲ್ಲಿ ಮುಳುಗಿದೆ.
ದೇಶ-ವಿದೇಶಗಳಿಂದ ದಸರಾಕ್ಕಾಗಿ ಪ್ರವಾಸಿಗರು ಆಗಮಿಸಿದ್ದಾರೆ. ಇಡೀ ನಗರ ವೀಕ್ಷಿಸುವ ಜನತೆ ಜಗನೋಹನ ಅರಮನೆಗೂ ಬರುತ್ತಾರೆ. ಏಕೆಂದರೆ ಇಲ್ಲಿನ ಮ್ಯೂಸಿಯಂ ನೋಡಲೇಬೇಕಾದುದು. ಜತೆಗೆ ಈ ಅರಮನೆ ಕೂಡಾ ಸುಂದರ. ಹಾಗಾಗಿ ಈ ಅರಮನೆ ಹೆಸರುವಾಸಿಯಾಗಿದೆ.
ಚೆಸ್ಕಾಂ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಜಗನೋಹನ ಅರಮನೆ ಲೆಕ್ಕಕ್ಕೆ ಬರಲಿಲ್ಲವೆ. ಇದು ಐತಿಹಾಸಿಕ, ಪಾರಂಪರಿಕ ಕಟ್ಟಡವಾಗಿದ್ದರೂ ಇದಕ್ಕೆ ಬೆಳಕಿನ ಅಲಂಕಾರ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಇದು ಅಕ್ಷಮ್ಯ. ಇದನ್ನು ಇಡೀ ಮೈಸೂರಿನ ಜನತೆ ಖಂಡಿಸಬೇಕಿದೆ ಎಂದು ಮೈಸೂರಿನ ನಾಗರೀಕರೂ ಮುಖಂಡರೂ ಹಾಗೂ ಅಭಿಮಾನಿ ರವಿನಂದನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆಸ್ಕಾಂನವರು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡಿದ್ದಾರೆ. ತಕ್ಷಣವೇ ಜಗನೋಹನ ಅರಮನೆ ವಿದ್ಯುತ್ ದೀಪಗಳಿಂದ ಬೆಳಗುವಂತೆ ಮಾಡಬೇಕೆಂದು ರವಿನಂದನ್ ಆಗ್ರಹಿಸಿದ್ದಾರೆ.
ಜಗನೋಹನ ಅರಮನೆ ಕಗ್ಗತ್ತಲಿನಲ್ಲಿದ್ದರೆ ಮೈಸೂರಿಗೆ ಕಪ್ಪು ಚುಕ್ಕೆಯಾಗಿ ಬಿಡುತ್ತದೆ. ಇದು ನಿಜಕ್ಕೂ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಚೆಸ್ಕಾಂ ಅಧ್ಯಕ್ಷರು ಇತ್ತ ಗಮನ ಹರಿಸಬೇಕು ರಮೇಶ್ ಬಂಡಿಸಿದ್ದೇಗೌಡರು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.