Friday, November 22, 2024
Homeರಾಜ್ಯಹಾಸನ ಪೆನ್‌ಡ್ರೈವ್‌ ಸೂತ್ರಧಾರ ಯಾರು..?

ಹಾಸನ ಪೆನ್‌ಡ್ರೈವ್‌ ಸೂತ್ರಧಾರ ಯಾರು..?

ಬೆಂಗಳೂರು, ಮೇ.1- ನಾನಲ್ಲ… ನಾನಲ್ಲ… ನನಗೂ ವಿಡಿಯೋಗೂ, ಪೆನ್‌ಡ್ರೈವ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಈಗ ಎಲ್ಲರೂ ಹೇಳುತ್ತಿದ್ದಾರೆ. ನಾನು ಪೆನ್‌ಡ್ರೈವ್‌ ಕೊಟ್ಟಿದ್ದು ಬಿಜೆಪಿ ನಾಯಕನಿಗೆ ಅಷ್ಟೇ ಎಂದು ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಹೇಳಿದರೆ, ನನಗೆ ಕೊಟ್ಟಿದ್ದು ನಿಜ. ಆದರೆ ಹಂಚಿದ್ದು ನಾನಲ್ಲ ಎಂದು ದೇವರಾಜೇಗೌಡ ಹೇಳುತ್ತಿದ್ದಾರೆ.

ವಿಡಿಯೋ ಹಿಂದೆ ಮಹಾ ನಾಯಕನ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರೆ, ಅಂತಹ ಚಿಲ್ಲರೆ ಕೆಲಸ ಮಾಡುವ ಅಭ್ಯಾಸ ನನಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಅತ್ತ ಹಾಸನದಲ್ಲಿ ಪ್ರೀತಂ ಗೌಡ ನನಗೂ ಪೆನ್‌ಡ್ರೈವ್‌ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಹಾಸನ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಶ್ರೇಯಸ್‌‍ ಪಟೇಲ್‌ ತಾಯಿ ಅನುಪಮಾ ಅವರು ಕೂಡ ಪೆನ್‌ಡ್ರೈವ್‌ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಹಾಸನ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಪೆನ್‌ಡ್ರೈವ್‌ ಬಗ್ಗೆ ಡಿಸೆಂಬರ್‌ನಲ್ಲೇ ಪ್ರಸ್ತಾಪಿಸಿದ್ದೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಈ ಬಗ್ಗೆ ಪತ್ರಕೂಡ ಬರೆದಿದ್ದೆ ಎಂದು ಹೇಳಿದ್ದಾರೆ. ಆದರೆ ವಿಜಯೇಂದ್ರ ಅವರು ಯಾವುದೇ ಪತ್ರ ನನಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಹಾಗಾದರೆ ಹಾಸನದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಮಾಡಿದ್ಯಾರು… ಹಂಚಿದ್ಯಾರು… ಹಾಸನದ ಮನೆ ಮನೆಗೂ ಪೆನ್‌ಡ್ರೈವ್‌ಗಳನ್ನು ತಲುಪಿಸಿದ್ಯಾರು…. ಎಂಬ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾದ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಹಲ್‌ ಚಲ್‌ ಸೃಷ್ಟಿಸಿದ ಹಾಸನ ಪೆನ್‌ಡ್ರೈವ್‌ ಸೃಷ್ಟಿಕರ್ತ ಯಾರು…? ಅಶ್ಲೀಲ ವಿಡಿಯೋಗಳು ಫೋನ್‌ಗಳಲ್ಲಿ, ವಾಟ್ಸ್ಯಾಪ್‌ಗಳಲ್ಲಿ ಹರಿದಾಡುತ್ತಿದ್ದಾಗ ಒಬ್ಬರಿಗೊಬ್ಬರು ಫಾರ್ವರ್ಡ್‌ ಮಾಡಿ ಗುಸು ಗುಸು ಪಿಸಿಪಿಸಿಯೊಂದಿಗೆ ಖುಷಿ ಪಟ್ಟವರೇ ಹೆಚ್ಚು.

ಅಬ್ಬಾ… ಇದು ಹೀಗಿದೆಯೇ, ಚುನಾವಣೆ ಮೇಲೆ ಪರಿಣಾಮ ಬೀರಿದೆ. ಏ.. ಇದು ನಿಜವೇ, ಇದು ಸುಳ್ಳು, ಇದು ಫೇಕ್‌ ವಿಡಿಯೋ ಎಂಬಂತಹ ಮಾತುಗಳು ಕೇಳಿಬಂದವು.ನೂರಾರು ವಿಡಿಯೋಗಳು ಮೊಬೈಲ್‌ನಲ್ಲಿ ಯಾವಾಗ ಹರಿದಾಡಿದವೋ ಮಹಿಳಾ ಆಯೋಗ ರಾಜ್ಯಸರ್ಕಾರಕ್ಕೆ ಪತ್ರ ಬರೆದು ಎಸ್‌‍ಐಟಿ ತಂಡ ರಚಿಸುವಂತೆ ಮನವಿ ಮಾಡಿತ್ತು. ಕೂಡಲೇ ಸರ್ಕಾರ ಪ್ರಕರಣವನ್ನು ಎಸ್‌‍ಐಟಿಗೆ ವಹಿಸಿತು. ಆಗ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಹಾಸನ, ಮಂಡ್ಯ, ಮೈಸೂರು, ಬೆಳಗಾವಿ, ಧಾರವಾಡ, ಕಲಬುರಗಿ ಎಲ್ಲೆಡೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದವು.ಈ ನಡುವೆ ಪ್ರಜ್ವಲ್‌ ರೇವಣ್ಣ ಅವರು ಪೂರ್ವನಿಯೋಜಿತವೋ, ಕಾಕತಾಳೀಯವೋ ವಿದೇಶಕ್ಕೆ ಪ್ರವಾಸ ಬೆಳೆಸಿದ್ದರು.

ಇದರಿಂದ ಮತ್ತುಷ್ಟು ಪ್ರತಿಭಟನೆಗಳು ಹೆಚ್ಚಾದವು. ಚುನಾವಣಾ ಸಂದರ್ಭದಲ್ಲಿ ಪ್ರತಿಭಟನೆ ತೀವ್ರಗೊಂಡು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ರಾಜ್ಯ ಪೊಲೀಸ್‌‍ ಮಹಾನಿರ್ದೇಶಕರಿಗೆ ಪತ್ರ ಬರೆದು ಪ್ರಕರಣದ ಬಗ್ಗೆ ತನಿಖೆ ನಡೆಸಿ ಮೂರು ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿತು.

ಈ ನಡುವೆ ಹೊಳೇನರಸೀಪುರ ಟೌನ್‌ ಠಾಣೆಯಲ್ಲಿ ಸಂತ್ರಸ್ತೆ ಎಚ್‌.ಡಿ. ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ದಾಖಲಾಗಿತ್ತು.ದೂರು ದಾಖಲಾಗುತ್ತಿದ್ದಂತೆ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು. ರಾಜಕೀಯ ಪಕ್ಷಗಳ ಕೆಸರೆರಚಾಟವು ಹೆಚ್ಚಾಯಿತು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರನ್ನು ಗುರಿಯಾಗಿಸಿ, ಬಿಜೆಪಿಯೊಂದಿಗೆ ಜೆಡಿಎಸ್‌‍ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಟೀಕೆ ಟಿಪ್ಪಣಿಗಳು ನಡೆದವು. ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್‌‍ ಈ ಪ್ರಕರಣವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡು ಪ್ರತಿಭಟನೆಗಳನ್ನು ನಡೆಸಿತು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜೆಡಿಎಸ್‌‍ ಎನ್‌ಡಿಎ ಭಾಗ ಅಷ್ಟೇ. ನಾವು ಪ್ರಜ್ವಲ್‌ ಪ್ರಕರಣವನ್ನು ಸಮರ್ಥಿಸುವುದಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ. ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ನಮ ಅಭ್ಯಂತರವಿಲ್ಲ. ಜೆಡಿಎಸ್‌‍-ಕಾಂಗ್ರೆಸ್‌‍ ಮೈತ್ರಿಯಲ್ಲಿಯೇ ಪ್ರಜ್ವಲ್‌ ಗೆಲುವು ಸಾಧಿಸಿದ್ದು ಎಂದು ಕಾಂಗ್ರೆಸ್‌‍ ಹೋರಾಟಕ್ಕೆ ತಿರುಗೇಟು ನೀಡಿದ್ದರು. ಪ್ರಜ್ವಲ್‌ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಘಟಕಕ್ಕೆ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರು.

ಈ ನಡುವೆ ಮುಜುಗರಕ್ಕೆ ಈಡಾದ ಜೆಡಿಎಸ್‌‍ ಕಾರ್ಯಕಾರಿಣಿ ಸಭೆ ನಡೆಸಿ ಪ್ರಜ್ವಲ್‌ ಅವರನ್ನು ಅಮಾನತುಗೊಳಿಸಿತ್ತು. ತನಿಖೆಯಲ್ಲಿ ಸಾಬೀತಾದರೇ ಶಾಶ್ವತವಾಗಿ ಉಚ್ಚಾಟನೆ ಮಾಡುವುದಾಗಿ ಜೆಡಿಎಸ್‌‍ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.ಇಷ್ಟೆಲ್ಲಾ ಘಟನೆಗಳಿಗೆ ಕಾರಣವಾದ ಪೆನ್‌ಡ್ರೈವ್‌ ಮಾಡಿ ಹಂಚಿದವರು ಯಾರು ಎಂಬುದು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

RELATED ARTICLES

Latest News