Saturday, April 19, 2025
Homeರಾಜಕೀಯ | Politicsಕರ್ನಾಟಕಲ್ಲಿ ಬಿಜೆಪಿ ಅಧ್ವಾನ, ನಿಲ್ಲದ ಒಳಜಗಳ, ವರಿಷ್ಠರಿಗೆ ತಲೆನೋವು

ಕರ್ನಾಟಕಲ್ಲಿ ಬಿಜೆಪಿ ಅಧ್ವಾನ, ನಿಲ್ಲದ ಒಳಜಗಳ, ವರಿಷ್ಠರಿಗೆ ತಲೆನೋವು

Why BJP struggling in Karnataka?

ಬೆಂಗಳೂರು, ಫೆ.23- ಮಹಾರಾಷ್ಟ್ರ ಚುನಾವಣೆ ಮುಗಿಯಿತು, ಹರಿಯಾಣದಲ್ಲೂ ಸರ್ಕಾರ ಅಧಿಕಾರಕ್ಕೆ ಬಂತು, ದೆಹಲಿಯಲ್ಲಿ ಸರ್ಕಾರ ರಚನೆ ಆಯಿತು. ಆದರೆ ವರ್ಷಗಳಿಂದ ಕಾಡುತ್ತಿರುವ ಕರ್ನಾಟಕ ಬಿಜೆಪಿಯ ಭಿನ್ನಮತಕ್ಕೆ ಮಾತ್ರ ತೆರೆಬೀಳುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರೊಬ್ಬರ ಧ್ವನಿಯಾಗಿದ್ದಾಗ ತೇಪೆ ಹಚ್ಚಲು ಮುಂದಾಗದ ಬಿಜೆಪಿ ವರಿಷ್ಠರಿಗೆ ಈಗ, ಕರ್ನಾಟಕದ ಭಿನ್ನಮತದ ಸಮಸ್ಯೆ ಬೆಟ್ಟದಂತೆ ಕಾಡುತ್ತಿದೆ. ಅಥವಾ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸಮಯ ಸಂದರ್ಭ ನೋಡಿ ಎಂಟ್ರಿ ಕೊಡುತ್ತದೋ? ಆದರೆ ಅದು ಆಗುವುದು ಯಾವಾಗ ಎಂಬುದು ಪಕ್ಷದ ಕಾರ್ಯಕರ್ತರ ಪ್ರಶ್ನೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ಭಿನ್ನಮತ ಮುಗಿದು ಎಲ್ಲವೂ ಇಷ್ಟು ಹೊತ್ತಿಗೆ ಸುಸೂತ್ರವಾಗಬೇಕಿತ್ತು. ಫೆ.20ರೊಳಗೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದ್ದರು. ಆದರೆ ದಿನಾಂಕ ಕಳೆದು ಎರಡು ದಿನವಾಗಿ ಹೋಗಿದೆ.

ಫೆ.20ಕ್ಕೆ ಕೇಂದ್ರ ಕೃಷಿ ಸಚಿವ ಮತ್ತು ಬಿಜೆಪಿ ವಲಯದಲ್ಲಿ ಮಾಮಾಜೀ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಶಿವರಾಜ್ ಸಿಂಗ್ ಚೌಹಾಣ್, ಬೆಂಗಳೂರಿಗೆ ಬಂದು, ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಆದರೆ, ಅವರ ಭೇಟಿ ಮುಂದೂಡುತ್ತಲೇ ಹೋಗುತ್ತಿದೆ. ಇನ್ನೊಂದು ಕಡೆ, ಯತ್ನಾಳ್ ಬಣದ ಪ್ರತ್ಯೇಕ ಸಭೆ ಮತ್ತೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ಒಂದು ದಿನದ ಕೆಳಗೆ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಮತ್ತೆ ಎಲ್ಲರೂ ಸಭೆ ಸೇರಿದ್ದಾರೆ. ಸಭೆ ಮುಗಿದ ನಂತರ ಮತ್ತೆ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿದಿದೆ. ಮೈಸೂರು ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿದ್ದ ಯತ್ನಾಳ್, ಅದ್ಯಾವುದೋ ಫೈಲಿಗೆ ಪೂಜೆ ಮಾಡಿಸಿದ್ದಾರೆ.

ಅವರ ಸಮ್ಮುಖದಲ್ಲಿ ವಿಜಯೇಂದ್ರ, ಯಡಿಯೂರಪ್ಪನವರಿಗೆ ಜಯವಾಗಲಿ ಎಂಬ ಘೋಷಣೆ ಮೊಳಗಿದೆ. ಇನ್ನೊಂದು ಕಡೆ, ಬಾಕಿ ಉಳಿದಿರುವ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ವಿಜಯೇಂದ್ರ ಮುಂದಾಗಿದ್ದಾರೆ. ಯತ್ನಾಳ್ ಗೈರಿನಲ್ಲಿ ವಿಜಯಪುರ ಅಧ್ಯಕ್ಷರ ಪ್ರಕ್ರಿಯೆಯನ್ನು ವಿಜಯೇಂದ್ರ ನಡೆಸಿದ್ದಾರೆ ಎನ್ನುವ ಇನ್ನೊಂದು ಆರೋಪ ಇವರಿಗೆ ಎದುರಾಗಿದೆ.

ರಾಜ್ಯ ಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶಿವರಾಜ್ ಸಿಂಗ್ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಬರಬಹುದು ಎಂದು ಬಿಜೆಪಿ ಕಚೇರಿಯಲ್ಲಿ ಸಿಗುವ ಸ್ಪಷ್ಟನೆ. ಆದರೆ, ಯಾವ ದಿನಾಂಕ ಎನ್ನುವ ವಿಚಾರದಲ್ಲಿ ರಾಜ್ಯದ ಯಾವ ನಾಯಕರಿಗೂ ಖಚಿತತೆ ಇಲ್ಲ. ಯಾಕೆಂದರೆ, ಚುನಾವಣೆಗೆ ಮುನ್ನ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಶಿವರಾಜ್ ಸಿಂಗ್ ಪಡೆದುಕೊಳ್ಳುತ್ತಾರೆ.

ಸದ್ಯದ ಮಟ್ಟಿಗೆ ವಿಜಯೇಂದ್ರ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ವರಿಷ್ಠರೂ ಅದನ್ನೇ ಬಯಸಿದ್ದೇ ಆದಲ್ಲಿ, ಯತ್ನಾಳ್ ಬಣದ ಭಿನ್ನಮತ ಕಮ್ಮಿಯಾಗಬಹುದು ಎನ್ನುವುದು ತಟಸ್ಥರಾಗಿ ಉಳಿದಿರುವ ನಾಯಕರ ಅಭಿಪ್ರಾಯ.

ಕರ್ನಾಟಕ ಬಿಜೆಪಿಯ ಒಳಜಗಳ ನಗೆಪಾಟಲಿಗೆ ಗುರಿಯಾಗುತ್ತಿದ್ದರೂ, ಬಿಜೆಪಿಯ ಹೈಕಮಾಂಡ್ ಯಾಕೆ ಮಧ್ಯ ಪ್ರವೇಶಿಸುತ್ತಿಲ್ಲ ಎನ್ನುವುದು ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಲ್ಲಿ ಕಾಡುತ್ತಿರುವ ಅನುಮಾನ. ಇದರ ಹಿಂದೆ, ಉದ್ದೇಶಪೂರ್ವಕ ನಡೆ ಏನಾದರೂ ವರಿಷ್ಠರನ್ನು ಇದೆಯೇ ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಯಾಕೆಂದರೆ, ಇತರ ರಾಜ್ಯಗಳಲ್ಲಿ ಬಿಜೆಪಿಯ ವರಿಷ್ಠರ ಎಚ್ಚರಿಕೆಗೆ ತುಟಿಕ್ ಪಿಟಿಕ್ ಅನ್ನದೇ ಇರುವಾಗ, ಕರ್ನಾಟಕದ ವಿಚಾರಕ್ಕೆ ಯಾಕೆ ಮಹತ್ವ ಕೊಡುತ್ತಿಲ್ಲ? ಭಿನ್ನಮತ ಎಷ್ಟು ಬೆಳೆಯುತ್ತದೆ ಎನ್ನುವುದು ನೋಡೋಣ ಎನ್ನುವ ನಿಲುವು ಇರಬಹುದೇ? ಈ ಉದಾಸೀನತೆಯ ಹಿಂದೆ ವಿಜಯೇಂದ್ರ ಅವರಿಗೂ ಗೊತ್ತಾಗಲಿ, ಎಲ್ಲವೂ ಏಕಪಕ್ಷೀಯವಾಗಿ ನಡೆಬಾರದು ಎನ್ನುವುದಕ್ಕಾಗಿ ಎಲ್ಲವನ್ನೂ ನೋಡಿಕೊಂಡು ಸದ್ಯದ ಮಟ್ಟಿಗೆ ಅಮಿತ್ ಶಾ ಸುಮ್ಮನಿದ್ದಾರಾ? ಈ ರೀತಿಯ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

RELATED ARTICLES

Latest News