ಹಾಸನ,ಮೇ9- ಪೆನ್‌ಡ್ರೈವ್ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದ್ದರೂ ನಾಲ್ವರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಜೆಡಿಎಸ್ ಲೀಗಲ್ ಸೆಲ್ ಪ್ರಶ್ನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕೀಲರಾದ ಎಸ್.ದ್ಯಾವೇಗೌಡ ಅವರು, ಏಪ್ರಿಲ್ 21ರಂದು ಪ್ರಜ್ವಲ್‌ಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್‌ವನ್ನು ಮನೆ ಮನೆಗಳಿಗೆ ಹಂಚಲಾಗಿದೆ.
ಏಪ್ರಿಲ್ 23ರಂದು ಜೆಡಿಎಸ್‌ನಿಂದ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ಅವರನ್ನು ಕರೆದು ಏಕೆ ವಿಚಾರಣೆ ಮಾಡಿಲಿಲ್ಲ, ಕೂಡಲೇ ಅವರುಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಶರತ್ ಎಂಬಾತ ಇನ್ನು ಬೇಲ್‌ಗೆ ಅರ್ಜಿನೇ ಹಾಕಿಲ್ಲ. ಇದನ್ನೆಲ್ಲ ಗಮನಿಸಿದರೆ ಸರ್ಕಾರದ ಒತ್ತಡವಿದೆ ಎನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಂಧನ ಸಾಧ್ಯತೆ :
ಪೆನ್‌ಡ್ರೈವ್ ಬಿಡುಗಡೆ ಆರೋಪದಲ್ಲಿ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಸೇರಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದ್ದು, ಬಂಧನ ಭೀತಿ ಎದುರಾಗಿದೆ. ಈ ಪ್ರಕರಣದಲ್ಲಿ ಕಾರ್ತಿಕ್ ಗೌಡ, ಪುಟ್ಟರಾಜ್, ನವೀನ್, ಚೇತನ್, ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಹಾಸನದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.
ಸಂಸದ ಪ್ರಜ್ವಲ್ ಅವರಿಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್ ಬಿಡುಗಡೆ ಆರೋಪದಡಿ ಜೆಡಿಎಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ ಈ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಈ ನಾಲ್ವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡಿದೆ. ಹಾಗಾಗಿ ಈ ನಾಲ್ವರಿಗೆ ಬಂಧನ ಭೀತಿ ಎದುರಾಗಿದೆ.
ವಿಡಿಯೋ ದೊರೆತ ಬಳಿಕ ನವೀನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಲು ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಮೊದಲ ಪೋಸ್ಟ್ ಮಾಡಿದ್ದ. ನಂತರ ಪ್ರಜ್ವಲ್‌ನ ಅಶ್ಲೀಲ ವಿಡಿಯೋ ಬಿಡುಗಡೆಗೆ ಮತ್ತೊಂದು ಪೋಸ್‌್ಟ ಮಾಡಿ ತದನಂತರ ಅದನ್ನು ಡಿಲಿಟ್ ಮಾಡಿದ್ದನು.ಇದನ್ನು ಗಂಭೀರವಾಗಿ ಗಮನಿಸಿದ್ದ ಜೆಡಿಎಸ್ ಅದನ್ನು ಸ್ಕ್ರೀನ್‌ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು.