Sunday, June 30, 2024
Homeರಾಜಕೀಯಕರ್ನಾಟಕದಲ್ಲಿ ಬಿಜೆಪಿ 25 ರಿಂದ 17 ಸ್ಥಾನಗಳಿಗೆ ಕುಸಿದಿದ್ದೇಕೆ..? ಕಾರಣಗಳೇನು..?

ಕರ್ನಾಟಕದಲ್ಲಿ ಬಿಜೆಪಿ 25 ರಿಂದ 17 ಸ್ಥಾನಗಳಿಗೆ ಕುಸಿದಿದ್ದೇಕೆ..? ಕಾರಣಗಳೇನು..?

ಬೆಂಗಳೂರು, ಜೂ.6– ಕಳೆದ ಬಾರಿ ರಾಜ್ಯದಲ್ಲಿ 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಕೇವಲ 17 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ರಾಯಚೂರು, ಬೀದರ್‌, ಕೊಪ್ಪಳ, ದಾವಣಗೆರೆ, ಚಾಮರಾಜನಗರ, ಕೊಪ್ಪಳ, ಬಳ್ಳಾರಿ ಕ್ಷೇತ್ರಗಳನ್ನು ಪಕ್ಷ ಕಳೆದುಕೊಂಡಿದೆ.

ಟಿಕೆಟ್‌ ನೀಡುವಾಗಲೇ ತಲೆದೋರಿದ್ದ ಅಸಮಾಧಾನ, ಗೊಂದಲ ಸರಿಪಡಿಸಿಕೊಳ್ಳುವಲ್ಲಿ ಎಡವಿದ ಪರಿಣಾಮ ಗೆಲ್ಲುವ ಅವಕಾಶ ಕಳೆದುಕೊಂಡಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.ಮಧ್ಯ ಕರ್ನಾಟಕದ ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆ ಕ್ಷೇತ್ರವನ್ನು ಕಳೆದುಕೊಳ್ಳಲು ಅಭ್ಯರ್ಥಿಗೆ ಎದುರಾದ ವಿರೋಧವೇ ಕಾರಣವಾಗಿದೆ. ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ವರ್‌ ಮತ್ತು ಅವರ ಕುಟುಂಬಕ್ಕೆ ಟಿಕೆಟ್‌ ನೀಡದಂತೆ ಹಾಲಿ ಮಾಜಿ ಶಾಸಕರು, ಜಿಲ್ಲೆಯ ಹಿರಿಯ ನಾಯಕ ಎಸ್‌.ಎ.ರವೀಂದ್ರನಾಥ್‌, ಎಂ.ಪಿ.ರೇಣುಕಾಚಾರ್ಯ, ಬಿ.ಪಿ.ಹರೀಶ್‌, ಮಾಡಾಳ್‌ ವಿರೂಪಾಕ್ಷಪ್ಪ ಕುಟುಂಬ ಸೇರಿ ಅನೇಕರು ರಾಜ್ಯ ಬಿಜೆಪಿಗೆ ಮನವಿ ಮಾಡಿದ್ದರು.

ಈ ನಿಟ್ಟಿನಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಒತ್ತಡ ಹೇರಿದ್ದರು. ಆದರೂ, ಸಿದ್ದೇಶ್ವರ್‌ ಅವರ ಪತ್ನಿಗೆ ಟಿಕೆಟ್‌ ನೀಡಲಾಯಿತು. ಇದನ್ನು ಬಹಿರಂಗವಾಗಿಯೇ ರೇಣುಕಾಚಾರ್ಯ ಅಂಡ್‌ ಟೀಂ ವಿರೋಧಿಸಿತು. ಪ್ರಚಾರ ಮಾಡದಿರುವ ನಿರ್ಧಾರ ಪ್ರಕಟಿಸಿತು. ೞಸಿದ್ದೇಶ್ವರ್‌ ಹಠಾವೋ, ದಾವಣಗೆರೆ ಬಚಾವೋ ಅಭಿಯಾನ ಸಹ ನಡೆಸಲಾಯಿತು. ಬಳಿಕ ಖುದ್ದು ಯಡಿಯೂರಪ್ಪ ಹೋಗಿ ಸಂಧಾನ ಮಾಡಿದರಾದರೂ, ಅಭ್ಯರ್ಥಿಗೆ ಜಿಲ್ಲಾ ನಾಯಕರಿಂದ ಸರಿಯಾದ ಸಾಥ್‌ ಸಿಗದೆ ಹಿನ್ನಡೆ ಅನುಭವಿಸಿದಂತಾಗಿದೆ.

ಬೀದರ್‌ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧವೂ ಪಕ್ಷದಲ್ಲಿ ಸಾಕಷ್ಟು ವಿರೋಧ ಎದುರಾಗಿತ್ತು. ಟಿಕೆಟ್‌ ನೀಡದಂತೆ ಪಕ್ಷದ ನಾಯಕರು ಆಗ್ರಹಿಸಿದ್ದರು. ಅವರು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ನಮ್ಮ ಭವಿಷ್ಯ ಹಾಳುಮಾಡುವ ಪ್ರಯತ್ನ ನಡೆಸಿದ್ದರು ಎಂದು ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಾಸಕರು ಗಂಭೀರ ಆರೋಪ ಮಾಡಿದ್ದರು.

ಪಕ್ಷದ ವೇದಿಕೆಯಲ್ಲಿಯೇ ಖೂಬಾ ವಿರುದ್ಧ ನೇರ ಮಾಜಿ ಸಚಿವ, ಔರಾದ್‌ ಶಾಸಕ ಪ್ರಭು ಚವ್ಹಾಣ್‌ ವಾಗ್ದಾಳಿ ನಡೆಸಿದ್ದರು. ಬಸವಕಲ್ಯಾಣ ಶಾಸಕ ಶರಣು ಸಲಗರ ಕೂಡ ಬೆಂಬಲವಾಗಿ ಮಾತನಾಡಿ, ಖೂಬಾ ಅವರಿಗೆ ಟಿಕೆಟ್‌ ನೀಡುವುದನ್ನು ವಿರೋಧಿಸಿದ್ದರು. ಇತರ ಮಾಜಿ ಶಾಸಕರು, ಜಿಲ್ಲಾ ನಾಯಕರು ಇದನ್ನೇ ಹೇಳಿದ್ದರು. ಆದರೂ ಅಸಮಾಧಾನಿತರನ್ನು ವಿಶ್ವಾಸಕ್ಕೆ ಪಡೆಯದೆ ಖೂಬಾ ಅವರಿಗೆ ಟಿಕೆಟ್‌ ನೀಡಲಾಯಿತು. ಚವ್ಹಾಣ್‌, ಸಲಗಾರ ಸೇರಿ ಅಸಮಾಧಾನಿತರು ದೂರ ಉಳಿದ ಪರಿಣಾಮ ಖೂಬಾ ಅವರಿಗೆ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.

ಕೊಪ್ಪಳ ಕ್ಷೇತ್ರದಲ್ಲಿಯೂ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ನೀಡದಂತೆ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯ ನಾಯಕರ ಬೇಡಿಕೆ ಪರಿಗಣಿಸದ ರಾಜ್ಯ ನಾಯಕರು ಹೊಸ ಮುಖಕ್ಕೆ ಮಣೆ ಹಾಕಿ ಡಾ.ಬಸವರಾಜ್‌ ಕ್ಯಾವಟೂರ್‌ ಅವರಿಗೆ ಟಿಕೆಟ್‌ ನೀಡಿದರು. ಇದರಿಂದ ಕರಡಿ ಸಂಗಣ್ಣ ಅಸಮಾಧಾನಗೊಂಡರು. ಇವರನ್ನು ಮನವೊಲಿಕೆ ಮಾಡಿ ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾದರು. ಕೇವಲ ಎನ್‌.ರವಿಕುಮಾರ್‌ ಮಾತ್ರ ಮನವೊಲಿಕೆ ಕಸರತ್ತು ನಡೆಸಿದರು. ಕೊನೆಗೆ ಕರಡಿ ಸಂಗಣ್ಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಇದರ ಪರಿಣಾಮ ಫಲಿತಾಂಶದ ಮೇಲೆ ಬೀರಿರುವುದು ಸತ್ಯ.

ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಉಮೇಶ್‌ ಜಾಧವ್‌ ಬಗ್ಗೆ ಯಾವುದೇ ವಿರೋಧ ಇರದೇ ಇರಲಿಲ್ಲ. ಆದರೆ, ಪಕ್ಷದ ಪ್ರಮುಖ ನಾಯಕರು ಕಾಂಗ್ರೆಸ್‌ ಸೇರಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಹಿಂದಿನ ಚುನಾವಣೆ ಸಮಯದಲ್ಲಿ ಪ್ರಭಾವಿ ನಾಯಕರಾದ ಬಾಬುರಾವ್‌ ಚಿಂಚನಸೂರ್‌, ಮಾಲೀಕಯ್ಯ ಗುತ್ತೇದಾರ್‌ ಬಿಜೆಪಿ ಸೇರಿದ್ದರು. ಆದರೆ, ಈ ಚುನಾವಣೆಯ ಸಮಯದಲ್ಲಿ ಇಬ್ಬರೂ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿದ್ದರು. 2019ರಲ್ಲಿ ಬಿಜೆಪಿ ನಡೆಸಿದ್ದ ತಂತ್ರವನ್ನೇ ಕಾಂಗ್ರೆಸ್‌ ಅನುಸರಿಸಿ ಪ್ರಭಾವಿಗಳನ್ನು ಸೆಳೆಯಿತು. ಪಕ್ಷ ತೊರೆಯುವ ನಾಯಕರನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದರು. ಇದು ಸಹಜವಾಗಿಯೇ ಪೆಟ್ಟು ಕೊಟ್ಟಿದೆ.

ಚಿಕ್ಕೋಡಿ ಕ್ಷೇತ್ರದಲ್ಲೂ ಹಾಲಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ರಮೇಶ್‌ ಕತ್ತಿ ಅಸಮಾಧಾನಕ್ಕೆ ಕಾರಣವಾಗಿತ್ತು. ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರ ಜೊತೆ ಸರಿಯಾಗಿ ಮಾತುಕತೆ ನಡೆಸಿ ವಿಶ್ವಾಸಕ್ಕೆ ಪಡೆಯಲು ಪಕ್ಷದ ನಾಯಕರು ಮುಂದಾಗಲಿಲ್ಲ. ಹೀಗಾಗಿ ರಮೇಶ್‌ ಕತ್ತಿ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿಲ್ಲ. ಇದು ಪಕ್ಷದ ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗಿದೆ.

ರಾಯಚೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಮಾಜಿ ಸಂಸದ ಬಿ.ವಿ.ನಾಯಕ್‌ ಪಟ್ಟು ಹಿಡಿದಿದ್ದರು. ಅವರ ಅಭಿಮಾನಿಗಳು ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದರು. ಇದಾದ ಬಳಿಕವೂ ಹಾಲಿ ಸಂಸದರಾಗಿದ್ದ ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಟಿಕೆಟ್‌ ನೀಡಲಾಯಿತು.

ಒಂದೆಡೆ ಬಂಡಾಯದ ಬಿಸಿ ತಣಿಸಲು ಬಿಜೆಪಿ ನಾಯಕರು ಸೋತರೆ, ಅಭ್ಯರ್ಥಿ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪ ಕೇಳಿಬಂದಿತು. ರಾಯಚೂರು ನಗರದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಹಾಲಿ ಸಂಸದರ ವಿರುದ್ಧ ಪ್ರತಿಭಟನೆ ನಡೆಸಿ, ೞಗೋಬ್ಯಾಕ್‌ ಅಮರೇಶ್ವರ ನಾಯಕ್‌ ಎನ್ನುವ ಘೋಷಣೆ ಕೂಗಿದರು.

ಈ ಟಿಕೆಟ್‌ ಫೈಟ್‌ ಅನ್ನು ನಿರ್ವಹಿಸಲು ನಾಯಕರು ಸರಿಯಾಗಿ ನಿರ್ವಹಿಸಿದ ಕಾರಣ ಬಿಜೆಪಿ ಬೆಲೆ ತೆರುವಂತೆ ಮಾಡಿದೆ.ಬಳ್ಳಾರಿ ಕ್ಷೇತ್ರದಲ್ಲಿ ಟಿಕೆಟ್‌ ಸಂಬಂಧ ಮೊಳಕಾಲ್ಮೂರು ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಅತೃಪ್ತಿ ಹೊಂದಿದ್ದರು. ಅಧಿ ಕೃತ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದರು.

ಅವರ ಮನವೊಲಿಕೆ ಮಾಡುವಲ್ಲೂ ಬಿಜೆಪಿ ನಾಯಕರು ವಿಫಲರಾದರು. ಅಲ್ಲದೇ, ಶ್ರೀರಾಮುಲು ಅತಿಯಾದ ಆತ್ಮವಿಶ್ವಾಸದಲ್ಲಿ ಬಂಡಾಯ ಕಡೆಗಣಿಸಿದರು. ಜೊತೆಗೆ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದರಿಂದಾಗಿ ಅನುಕೂಲವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೂ ಕ್ಷೇತ್ರ ಗೆಲ್ಲಲಾಗಿಲ್ಲ. ರೆಡ್ಡಿ ಫ್ಯಾಕ್ಟರ್‌ ಬಳ್ಳಾರಿ ಹಾಗೂ ಕೊಪ್ಪಳ ಎರಡೂ ಕಡೆಯೂ ಕೆಲಸ ಮಾಡಿಲ್ಲ.

ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಸಂಸದ ಶ್ರೀನಿವಾಸಪ್ರಸಾದ್‌ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಹೊಸಬರಿಗೆ ಬಿಜೆಪಿ ನಾಯಕರು ಹುಡುಕಾಟ ನಡೆಸಿದ್ದರು. ಶ್ರೀನಿವಾಸಪ್ರಸಾದ್‌ ಅಳಿಯ ಆಕಾಂಕ್ಷಿಯಾಗಿದ್ದರೂ ಅವರಿಗೆ ಟಿಕೆಟ್‌ ನೀಡಲಿಲ್ಲ. ಕಾಂಗ್ರೆಸ್‌?ನಲ್ಲಿ ವಿಧಾನಸಭೆ ಟಿಕೆಟ್‌ ಸಿಗದೆ ಬಿಜೆಪಿ ಸೇರಿದ್ದ ಬಾಲರಾಜ್‌ ಅವರಿಗೆ ಮಣೆ ಹಾಕಲಾಯಿತು. ಇದರಿಂದ ಸ್ವಪಕ್ಷೀಯರಲ್ಲಿ ಉಂಟಾದ ಅಸಮಾಧಾನ ಕಡೆಗಣಿಸಿದ್ದಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

RELATED ARTICLES

Latest News