Friday, September 20, 2024
Homeರಾಜಕೀಯ | Politics"ಮುಡಾ ಹಗರಣದ ಕಿಂಗ್‌ಪಿನ್‌ ಭೈರತಿ ಸುರೇಶ್‌ ಇನ್ನೂ ಏಕೆ ಅರೆಸ್ಟ್ ಆಗಿಲ್ಲ..?"

“ಮುಡಾ ಹಗರಣದ ಕಿಂಗ್‌ಪಿನ್‌ ಭೈರತಿ ಸುರೇಶ್‌ ಇನ್ನೂ ಏಕೆ ಅರೆಸ್ಟ್ ಆಗಿಲ್ಲ..?”

ಬೆಂಗಳೂರು,ಆ.3- ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಬಹುಕೋಟಿ ಅಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರೇ ಇದರ ಕಿಂಗ್‌ಪಿನ್‌. ಅವನನ್ನು ಏಕೆ ಬಂಧಿಸಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಅಂದಾಜು ನಾಲ್ಕು ಸಾವಿರ ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಇದರ ಸೂತ್ರಧಾರ ಭೈರತಿ ಸುರೇಶ್‌. ಅವನು ಏಕೆ ಹೊರಗಡೆ ಇದ್ದ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸರ್ಕಾರ ಈತನನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದರು.

ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಒಬ್ಬ ಸಚಿವರು ಈಗಾಗಲೇ ಜೈಲು ಪಾಲಾಗಿದ್ದಾರೆ. ಇದರಲ್ಲಿ 189 ಕೋಟಿ ಹಗರಣ ಆಗಿದೆ. ಅದಕ್ಕಾಗಿ ಸಚಿವರ ರಾಜೀನಾಮೆ ಪಡೆದು ಅವರನ್ನು ಇ.ಡಿ ಬಂಧಿಸಿದೆ. ಹಾಗಾದರೆ ಭೈರತಿ ಸುರೇಶ್‌ ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಮುಂದುವರೆದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ವಾಲೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದು ನ್ಯಾಯ, ಮುಡಾಕ್ಕೆ ಇನ್ನೊಂದು ನ್ಯಾಯವೇ? ಮಾಜಿ ಸಚಿವ ಬಿ.ನಾಗೇಂದ್ರ ಜೈಲಿಗೆ ಹೋಗುವುದಾದರೆ ಸಾವಿರಾರು ಕೋಟಿ ಅಕ್ರಮ ಎಸಗಿರುವ ಭೈರತಿ ಸುರೇಶ್‌ ಕೂಡ ಜೈಲಿಗೆ ಹೋಗಬೇಕಲ್ಲವೇ ಎಂದು ವಿಶ್ವನಾಥ್‌ ಹರಿಹಾಯ್ದರು.

ಮುಡಾದಲ್ಲಿ ಅಕ್ರಮ ಎಸಗಿರುವ ಆಯುಕ್ತರ ಮೇಲೆ ಸರ್ಕಾರ ಏಕೆ ಕ್ರಮ ಜರುಗಿಸಿಲ್ಲ? ಅವರನ್ನು ರಕ್ಷಣೆ ಮಾಡಲು ನಗರಾಭಿವೃದ್ಧಿ ಸಚಿವರು ಮುಂದಾಗಿರಬಹುದು. ಪ್ರತಿಪಕ್ಷದವರು ನಿವೇಶನ ಪಡೆದುಕೊಂಡಿದ್ದಾರೆ. ಅವರ ದಾಖಲೆಗಳನ್ನು ಕಲೆ ಹಾಕುವುದರಲ್ಲಿ ಇವರು ನಿರತರಾಗಿದ್ದಾರೆಯೇ? ಎಂದು ಟೀಕಾ ಪ್ರಹಾರ ನಡೆಸಿದರು.

ಇನ್ನು ವಿಶ್ವನಾಥ್‌ ತಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಕೆಂಡಕಾರಿದರು. ಸಿದ್ದರಾಮಯ್ಯನವರೇ ನಿಮಗೆ ರಾಜ್ಯಪಾಲರು ಶೋಕಾಸ್‌‍ ನೋಟಿಸ್‌‍ ಕೊಟ್ಟಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ರಾಜ್ಯಪಾಲರು ನೋಟಿಸ್‌‍ ಕೊಟ್ಟಿರುವುದು ಸರಿ ಎಂದು ಸಮರ್ಥಿಸಿದರು.

ಅವರ ನೋಟಿಸ್‌‍ಗೆ ಸರಿಯಾದ ಉತ್ತರ ಕೊಡದೆ ನೀವು ಏನೇನೊ ಬಾಯಿಗೆ ಬಂದಂತೆ ಮಾತನಾಡಬೇಡಿ, ನೀವೊಬ್ಬ ವಕೀಲರಾಗಿ ಕಾನೂನಿನ ಅರಿವು ನಿಮಗಿಲ್ಲವೇ? ರಾಜ್ಯಪಾಲರ ನೋಟಿಸ್‌‍ಗೆ ಉತ್ತರ ಕೊಡಬೇಕಾಗಿದ್ದು ನಿಮ ಕರ್ತವ್ಯ. ಅದನ್ನು ಬಿಟ್ಟು ಅವರು ಆ ಪಕ್ಷದವರಿಗೆ , ಈ ಪಕ್ಷದವರಿಗೆ ಎಂದು ಹೇಳುವುದನ್ನು ಮಾಡಬೇಡಿ. ಈಗ ನಿಮಗೆ ಶೋಭೆ ತರುವುದಿಲ್ಲ ಎಂದು ವಿಶ್ವನಾಥ್‌ ಎಚ್ಚರಿಸಿದರು.

ಸಿದ್ಧರಾಮಯ್ಯನವರೇ ನೀವು ನಿಮ ಸ್ಥಾನಕ್ಕೆ ಗೌರವದಿಂದ ರಾಜೀನಾಮೆ ಕೊಟ್ಟು ಇರುವ ಅಲ್ಪಸ್ವಲ್ಪ ಘನತೆಯನ್ನು ಹೆಚ್ಚಿಸಿಕೊಳ್ಳಿ. ಬಾಯಿಗೆ ಬಂದಂತೆ ಮಾತನಾಡುವುದರಿಂದ ನೀವು ದೊಡ್ಡವರಾಗುವುದಿಲ್ಲ. ನಿಮ ಇತ್ತೀಚಿನ ಬೆಳವಣಿಗೆಯನ್ನು ನೋಡಿದರೆ ನೀವು ಹಠಕ್ಕೆ ಬಿದ್ದು ಬಂಡತನ ಪ್ರದರ್ಶನ ಮಾಡುತ್ತಿದ್ದೀರಿ. ನಾವು-ನೀವು ಒಟ್ಟಿಗೆ ಬೆಳೆದವರು. ಒಟ್ಟಿಗೆ ಕಾನೂನು ಓದಿದ್ದೇವೆ ಎಂದು ಹೇಳಿದರು.

ನಿಮಗೆ ಅನುಕೂಲಕ್ಕೆ ಬೇಕಾದಾಗ ಕಾನೂನು ಸಂವಿಧಾನ, ರಾಜ್ಯಪಾಲರು ಎಲ್ಲವೂ ಸರಿ ಇರುತ್ತದೆ. ಒಂದು ಶೋಕಾಸ್‌‍ ನೋಟಿಸ್‌‍ ಕೊಟ್ಟಿಲ್ಲ ಎಂದ ತಕ್ಷಣ ಇಡೀ ವ್ಯವಸ್ಥೆಯೇ ಸರಿ ಇಲ್ಲ ಎಂದು ಹೇಳುವುದು ಸರಿಯಲ್ಲ. ಶೋಕಾಸ್‌‍ ನೋಟಿಸ್‌‍ಗೆ ಉತ್ತರ ಕೊಡದೆ ಸಚಿವ ಸಂಪುಟ ಸಭೆಯಲ್ಲಿ ನೋಟಿಸ್‌‍ ವಾಪಸ್‌‍ ಪಡೆಯಬೇಕೆಂದು ನಿಮ ಸಂಪುಟದ ಸಹೋದ್ಯೋಗಿಗಳಿಂದ ಒತ್ತಡ ಹಾಕುತ್ತೀರಿ.

ನಾಲ್ಕು ದಶಕಗಳ ರಾಜಕೀಯದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎನ್ನುವ ನೀವು ಈಗ ಆರೋಪಿ ಸ್ಥಾನದಲ್ಲಿ ಇದ್ದೀರಿ ಎಂಬುದನ್ನು ಮರೆಯಬೇಡಿ. ಗೌರವದಿಂದ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ವಿಶ್ವನಾಥ್‌ ಟೀಕೆಗಳ ಸುರಿಮಳೆ ಗೈದರು.

RELATED ARTICLES

Latest News