Friday, October 17, 2025
Homeರಾಜ್ಯಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸಿದರೆ ಬಿಜೆಪಿಗೆ ಭಯವೇಕೆ..? : ಪ್ರಿಯಾಂಕ್‌ ಪ್ರಶ್ನೆ

ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸಿದರೆ ಬಿಜೆಪಿಗೆ ಭಯವೇಕೆ..? : ಪ್ರಿಯಾಂಕ್‌ ಪ್ರಶ್ನೆ

Why is BJP afraid ?: Priyank questions

ಬೆಂಗಳೂರು, ಅ.17- ಸರ್ಕಾರಿ ಸ್ವತ್ತುಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿರುವ ಸಂಪುಟ ತೀರ್ಮಾನದಲ್ಲಿ ಯಾವುದೇ ಒಂದು ಸಂಘಟನೆಯ ಹೆಸರನ್ನು ಉಲ್ಲೇಖಿಸಿಲ್ಲ, ಇದು ಎಲ್ಲರಿಗೂ ಅನ್ವಯವಾಗುವ ಕಾನೂನು. ಏಕರೂಪಕ್ಕೆ ತರುವ ಪ್ರಯತ್ನ. ಹಾಗಿದ್ದರೂ ಬಿಜೆಪಿಯವರು ನೊಂದುಕೊಳ್ಳುತ್ತಿರುವುದೇಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ವಿಷಯಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಕ್ಕೂ ತಿರುಗೇಟು ನೀಡಿದರು. ವಿಷಯಾಂತರಿಸುವ ಪ್ರಯತ್ನ ಎಂದೇ ಭಾವಿಸಲಿ. ಆದರೆ ನಾವು ಕೇಳುತ್ತಿರುವುದರಲ್ಲಿ ಅಕ್ರಮವಿದೆಯೇ? ಅಥವಾ ನ್ಯಾಯಯುತವೇ? ಎಂಬುದಕ್ಕೆ ಉತ್ತರ ನೀಡಬೇಕು. ಇವರಿಗೆ ಇಷ್ಟೊಂದು ಭಯ ಏಕೆ? ಎಂದು ಪ್ರಶ್ನಿಸಿದರು.

ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ನಿಷೇಧಿಸಿದ್ದೇವೆ ಎಂದು ನಾವು ಎಲ್ಲಿಯೂ ಹೇಳಲಿಲ್ಲ. ಏಕರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಏಕೆ ಇಷ್ಟೊಂದು ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರ ಸರಿ ಇಲ್ಲ ಎಂದಾದರೆ, ಬೀದಿಗಿಳಿದು ಹೋರಾಟ ನಡೆಸಲಿ. ಅವರನ್ನು ಯಾರೂ ಬೇಡ ಎಂದಿಲ್ಲ. ಬುದ್ಧಬಸವ ಅಂಬೇಡ್ಕರ್‌ ತತ್ವವನ್ನು ರಾಜ್ಯದಲ್ಲಿ ಪಾಲಿಸಲು ಹೊರಟಿದ್ದೇವೆ. ಪ್ರಬುದ್ಧ ಸಮಾಜ ತರುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಬುದ್ಧತೆ ಇದ್ದರೆ, ಸಮೃದ್ಧ ಸಮಾಜ ಇರಲಿದೆ ಎಂದರು.

ಖಾಸಗಿ ಸಂಘ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಬಿಜೆಪಿಯವರಿಗೆ ಸಮಸ್ಯೆಯಾಗುವುದಾದರೆ, ಅದಕ್ಕೆ ನಾವೇನು ಮಾಡಲಾಗುವುದಿಲ್ಲ. ಅವರು, ಕೇಶವಕೃಪ ಹತ್ರ ಹೋಗಿ ಬಾಯಿ ಬಡಿದುಕೊಳ್ಳಲಿ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಬದಲಾಗಿ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಆರ್‌ಎಸ್‌‍ಎಸ್‌‍ ಶಾಖೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಮಕ್ಕಳಿಲ್ಲ. ಈ ಬಗ್ಗೆ ನನ್ನ ತಕರಾರು ಇದೆ. ಬಡವರ ಮಕ್ಕಳನ್ನು ಗೋ ರಕ್ಷಣೆ, ಧರ್ಮ ರಕ್ಷಣೆ ಎಂದು ದುರ್ಬಳಕೆ ಮಾಡಿಕೊಳ್ಳುತ್ತಿರುವ ನಾಯಕರು ತಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಿಸಿ, ಗೋ ರಕ್ಷೆಗಾಗಿ ರಸ್ತೆಗೆ ಬಿಡಲಿ, ಗೋ ಮೂತ್ರ ಕುಡಿಯಲು ಹೇಳಲಿ, ಗಣವೇಷ ಧರಿಸಿ, ಧರ್ಮ ರಕ್ಷಣೆ ಮಾಡಲಿ. ಆಗ ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ ಎಂದು ಹೇಳಿದರು.

ನಾಲ್ಕು ದಿನದಿಂದ ಪುಢಾರಿಗಳ ಮೂಲಕ ನನಗೆ ಬೆದರಿಕೆ ಹಾಕಿಸಲಾಗುತ್ತಿದೆ. ನನ್ನ ಮಾತನ್ನು ನಾನು ನಿಲ್ಲಿಸುವುದಿಲ್ಲ. ಎಷ್ಟೇ ಬೆದರಿಕೆ ಬಂದರೂ ಜಗ್ಗುವುದಿಲ್ಲ. ಸರ್ಕಾರಿ ಶಾಲೆ, ಆಟದ ಮೈದಾನ, ಉದ್ಯಾನವನಗಳು ಹೇಗಿರಬೇಕು ಎಂದು ಹಿಂದೆ ಬಿಜೆಪಿ ಸರ್ಕಾರ ಮಾಡಿದ ಕಾನೂನನ್ನೇ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಕಾನೂನು ಪಾಲನೆ ಮಾಡದಿದ್ದವರ ವಿರುದ್ಧ ಕ್ರಮ ಕೈಗೊಳ್ಳುವುದು ಶತಃಸಿದ್ಧ. ಅನುಮತಿ ಪಡೆದು, ಅವರು ಪಥ ಸಂಚಲನ ಮಾಡಲಿ. 100 ವರ್ಷದ ಆಚರಣೆ ವೇಳೆ 100 ಕಡೆ ಪಥ ಸಂಚಲನ ಮಾಡಿದ್ದಾರೆ. ಯಾರ ಅನುಮತಿ ಪಡೆದಿದ್ದಾರೆ? ಲಾಠಿ ಹಿಡಿದು ಹೋರಾಡಲು ಯಾವ ಧರ್ಮದಲ್ಲಿ ಅವಕಾಶವಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಪದೇಪದೇ ಕಲಬುರಗಿಗೆ ಬರುವುದನ್ನು ನಾನು ಸ್ವಾಗತಿಸುತ್ತೇನೆ. ನಾನು ಈಗಾಗಲೇ ಎಚ್ಚರವಾಗಿದ್ದೇನೆ. ಪ್ರಬುದ್ಧತೆ ಇರುವುದಕ್ಕಾಗಿಯೇ ಪತ್ರ ಬರೆದಿದ್ದೇನೆ. ಬಿಜೆಪಿಯವರು ಬಂದು ಎಚ್ಚರಿಕೆ ಕೊಡುವ ಅಗತ್ಯ ಇಲ್ಲ. ಅವರಿಗೆ ಕಾನೂನಿನ ತಿಳವಳಿಕೆ ನೀಡಲಾಗುತ್ತಿದೆ. ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇನ್ಫೋಸಿಸ್‌‍ನ ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರು ಮಾಹಿತಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಎಲ್ಲರೂ ಸಹಕರಿಸಿ ಮಾಹಿತಿ ನೀಡಿದರೆ ಒಳ್ಳೆಯದಾಗುತ್ತದೆ. ನಾನು ಮೇಲ್ಜಾತಿ, ಸೂಪರ್‌ ಶ್ರೀಮಂತ ಎಂದು ಹೇಳಿ ಸಮೀಕ್ಷೆಯಲ್ಲಿ ಭಾಗವಹಿಸದಿರುವುದು ಸರಿಯಲ್ಲ.

ಮುಂದೆ ಕೇಂದ್ರ ಸರ್ಕಾರ ಕೂಡ ಜನಗಣತಿ ಹಾಗೂ ಜಾತಿ ಸಮೀಕ್ಷೆ ನಡೆಸುತ್ತದೆ. ಆಗಲೂ ಇವರು ಭಾಗವಹಿಸುವುದಿಲ್ಲ ಎನ್ನುತ್ತಾರೆಯೇ? ಎಂದು ಪ್ರಶ್ನಿಸಿದರು.ಕೆಲವು ಅವಿವೇಕಿ ಸಂಸದರು ನೀಡಿದ ಹೇಳಿಕೆಗಳಿಂದ ಪ್ರಭಾವಿತರಾಗಿ ನಾರಾಯಣಮೂರ್ತಿ ಅವರು, ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರಬಹುದು ಎಂದರು.

RELATED ARTICLES

Latest News