ಬೆಂಗಳೂರು,ಮೇ22-ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಿದರೆ ಬಿಜೆಪಿಯವರಿಗೆ ಏಕೆ ಹೊಟ್ಟೆ ಉರಿ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡುವ ಬಗ್ಗೆ ಈ ಹಿಂದೆಯೇ ಸಚಿವ ಸಂಪುಟದಲ್ಲಿ ಚರ್ಚೆಯಾಗಿತ್ತು. ಮತ್ತೆ ಚರ್ಚೆಗೆ ಬಂದಿದೆ ಎಂದರು.
ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಈ ರೀತಿ ಬಿಜೆಪಿಯವರೇ ಹೆಸರು ಬದಲಾವಣೆ ಮಾಡಿದ್ದಾರೆ. ರಾಮನಗರ ಹೆಸರು ಬದಲಾವಣೆ ಮಾಡಲು ಬಿಜೆಪಿಯವರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದರು.
ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ಲ್ಯಾಂಡ್ ಮಾಫಿಯಾ ಆಗುತ್ತದೆಯೇ? ಅರ್ಥವಿರದ ಮಾತುಗಳನ್ನು ಆಡುತ್ತಾರೆ. ವಿರೋಧ ಪಕ್ಷದವರೂ ಬುದ್ದಿವಂತರಿದ್ದಾರೆ. ಆದರೆ ಸಾಮಾನ್ಯಜ್ಞಾನ ಬಳಸುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.