ನವದೆಹಲಿ, ನ.14: ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ದುರ್ಬಲಗೊಳಿಸಲು ಮಹಾಯುತಿ ಮತ್ತು ಕೇಂದ್ರ ಸರಕಾರಗಳು ಏಕೆ ಉತ್ಸುಕವಾಗಿವೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಮಹಾರಾಷ್ಟ್ರದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಗಳಿಗೆ ಮುಂಚಿತವಾಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು ಮರಾಠಾವಾಡಾದಲ್ಲಿ ನೀರಿನ ಕೊರತೆಯನ್ನು ಪರಿಹರಿಸಲು ಅವರ ದಷ್ಟಿಕೋನವೇನು ಎಂಬುದು ಸೇರಿದಂತೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ದುರ್ಬಲಗೊಳಿಸಲು ಮಹಾಯುತಿ ಮತ್ತು ಕೇಂದ್ರ ಸರ್ಕಾರ ಏಕೆ ಉತ್ಸುಕವಾಗಿದೆ ಎಂದು ರಮೇಶ್ ಪ್ರಶ್ನಿಸಿದ್ದಾರೆ. ರಾಯಗಡ್ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜ್ ಅವರ ರಾಜಧಾನಿಯಾಗಿತ್ತು, ಮಹಾರಾಷ್ಟ್ರದ ಮಹಾಯುತಿ ಸರ್ಕಾರ ಮತ್ತು ನವದೆಹಲಿಯ ಅದರ ಪೋಷಕ ಅವರನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏಳು ವರ್ಷಗಳ ಹಿಂದೆ, ಮುಂಬೈ ಬಳಿಯ ಅರೇಬಿಯನ್ ಸಮುದ್ರದಲ್ಲಿ 696 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆಗೆ ಪ್ರಧಾನಿ ಅಡಿಪಾಯ ಹಾಕಿದರು, ಆದರೆ ನಂತರ ಮಹಾರಾಷ್ಟ್ರ ಸರ್ಕಾರ ಮೌನವಾಗಿ ಕೈಬಿಟ್ಟಿದೆ ಎಂದು ಅವರು ಹೇಳಿದರು.