Friday, September 20, 2024
Homeರಾಜಕೀಯ | Politicsಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಕುತೂಹಲ ಕೆರಳಿಸಿದೆ ವಿಜಯೇಂದ್ರ ದೆಹಲಿ ಭೇಟಿ

ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಕುತೂಹಲ ಕೆರಳಿಸಿದೆ ವಿಜಯೇಂದ್ರ ದೆಹಲಿ ಭೇಟಿ

Vijayendra's visit to Delhi

ಬೆಂಗಳೂರು,ಸೆ.10- ಮುಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ನವದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿ.ವೈ.ವಿಜಯೇಂದ್ರ ದೆಹಲಿಗೆ ವರಿಷ್ಠರ ಸೂಚನೆಯಂತೆ ಮಾತುಕತೆ ನಡೆಸಲು ಪ್ರಯಾಣ ಬೆಳೆಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮೇಲ್ನೋಟಕ್ಕೆ ದೆಹಲಿ ಪ್ರಯಾಣದಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಪಕ್ಷದ ಮೂಲಗಳು ಹೇಳಿವೆಯಾದರೂ ಪ್ರಸಕ್ತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ವಿಜಯೇಂದ್ರ ದಿಢೀರ್‌ ದೆಹಲಿಗೆ ಪ್ರಯಾಣ ಬೆಳೆಸಿರುವುದಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.ಒಂದು ಕಡೆ ಸಚಿವ ಎಂ.ಬಿ.ಪಾಟೀಲ್‌ ದೆಹಲಿಯಲ್ಲಿ ಬೀಡು ಬಿಟ್ಟಿರುವುದು, ಕಳೆದ ವಾರ ಸಚಿವರಾದ ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ, ದೆಹಲಿಯಲ್ಲೇ ಎರಡು ದಿನ ವಾಸ್ತವ್ಯ ಹೂಡಿ ಎಐಸಿಸಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಸದಸ್ಯತ್ವ ನೋಂದಣಿ ನಡೆಸುತ್ತಿದ್ದ ವಿಜಯೇಂದ್ರ ದಿಢೀರನೇ ಛಲವಾದಿ ನಾರಾಯಣಸ್ವಾಮಿ ಜೊತೆ ದೆಹಲಿಗೆ ತೆರಳಿರುವುದು ಬಿಜೆಪಿಯಲ್ಲಿ ಹಠಾತ್‌ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.

ಕಿತ್ತೂರು ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರು ಕೆಲದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.ಬೆಳಗಾವಿಯ ಮಾಜಿ ಸಚಿವರೊಬ್ಬರು ಮಹಾರಾಷ್ಟ್ರದ ಬಿಜೆಪಿ ಹಿರಿಯ ನಾಯಕರ ಜೊತೆ ಸತತ ಸಂಪರ್ಕದಲ್ಲಿದ್ದು ಅವರ ಸೂಚನೆ ಮೇರೆಗೆ ಪ್ರಮೋದ್‌ ಸಾವಂತ್‌ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜಕಾರಣದ ಬೆಳವಣಿಗೆಗಳ ಬಗ್ಗೆ ದೆಹಲಿ ಬಿಜೆಪಿ ನಾಯಕರು ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ಪ್ರತಿದಿನ ರಾಜ್ಯ ನಾಯಕರ ಜೊತೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.ಗುರುವಾರ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಅರ್ಜಿಯ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ.

ಸಿಎಂ ಪರ ವಾದ ಮಂಡಿಸಿರುತ್ತಿರುವ ಅಭಿಷೇಕ್‌ ಮನುಸಿಂಘ್ವಿ ಅವರ ವಾದ ಮುಗಿದ ಬಳಿಕ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಂದೇ ತೀರ್ಪನ್ನು ನೀಡಬಹುದು ಇಲ್ಲವೇ ಕಾಯ್ದಿರಿಸಬಹುದು. ಹೈಕೋರ್ಟ್‌ ನೀಡುವ ತೀರ್ಪು ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಹೈಕೋರ್ಟ್‌ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್‌ ಎತ್ತಿ ಹಿಡಿದರೆ ಸಿದ್ದರಾಮಯ್ಯನವರಿಗೆ ನೈತಿಕತೆ ಪ್ರಶ್ನೆ ಎದುರಾಗುತ್ತದೆ. ಆ ವೇಳೆ ರಾಜ್ಯ ರಾಜಕಾರಣದಲ್ಲಿ ಕೆಲವು ದಿಢೀರ್‌ ಬೆಳವಣಿಗೆಗಳು ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿಯೇ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ದೆಹಲಿಗೆ ತೆರಳಿರಬಹುದೆಂದು ಬಿಜೆಪಿಯಲ್ಲಿ ಗುಸುಗುಸು ಹಬ್ಬಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಇಂಥ ಸಾಧ್ಯಸಾಧ್ಯತೆಗಳನ್ನು ತಳ್ಳಿ ಹಾಕುತ್ತಿದ್ದು ಅಂತಹ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸುತ್ತಿದ್ದಾರೆ.

RELATED ARTICLES

Latest News