Sunday, July 6, 2025
Homeರಾಜ್ಯರಾಜ್ಯದಲ್ಲಿ ಇನ್ನೂ ಐದು ದಿನ ವ್ಯಾಪಕ ಮಳೆ ಸಾಧ್ಯತೆ

ರಾಜ್ಯದಲ್ಲಿ ಇನ್ನೂ ಐದು ದಿನ ವ್ಯಾಪಕ ಮಳೆ ಸಾಧ್ಯತೆ

rain likely in the state for five more days

ಬೆಂಗಳೂರು,ಜು.6- ಪೂರ್ವ ಅರಬ್ಬಿ ಸಮುದ್ರದಲ್ಲಿ ಉಂಟಾದ ಮೇಲೆ ಸುಳಿಗಾಳಿ (ಟ್ರಫ್) ಎಫೆಕ್ಟ್ ರಾಜ್ಯದ ಮೇಲೆ ತಟ್ಟಿದ್ದು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ ಐದು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಳಗಾವಿ, ಉತ್ತರಕನ್ನಡ, ದಕ್ಷಿಣಕನ್ನಡ, ರಾಯಚೂರು, ಕಾರವಾರ ಸೇರಿದಂತೆ ಮತ್ತಿತರ ಕಡೆ ಭಾರೀ ಮಳೆಯಾಗುತ್ತಿದ್ದು, ನದಿಗಳು ಉಕ್ಕಿಹರಿಯುತ್ತಿವೆ.

ಬಯಲುಸೀಮೆ ಜಿಲ್ಲೆಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮದ್ದೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ.

ಬೆಳಗಾವಿ :
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣ ಮತ್ತು ಉಪನದಿಗಳಿಗೆ ನೀರು ಹರಿದುಬರುತ್ತಿದೆ. ರಾಜಾಪುರ ಬ್ಯಾರೇಜ್‌ ನಿಂದ ಕೃಷ್ಣಾನದಿಗೆ 1.06 ಲಕ್ಷ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ವೇದಗಂಗಾ, ದೂದ್ ಗಂಗಾ ನದಿಗಳು ಉಕ್ಕಿಹರಿಯುತ್ತಿದ್ದು, ಕೆಳಹಂತದ 8 ಸೇತುವೆಗಳು ಜಲಾವೃತಗೊಂಡಿವೆ. ಅಲ್ಲದೆ ನರಸಿಂಹ ಒಡೆಯ ದತ್ತ ದೇವಸ್ಥಾನ ಜಲಾವೃತಗೊಂಡಿದೆ.

ರಾಯಚೂರು :
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ನಿನ್ನೆ 95 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಗಡ್ಡೆಗೂಳಿ ದೇವಸ್ಥಾನ ನೀರಿನಲ್ಲಿ ಮುಳುಗಡೆಯಾಗಿದೆ.

ಹೊಸಪೇಟೆಯ ಟಿಬಿ ಡ್ಯಾಂನಿಂದ 58,869 ಕ್ಯೂಸೆಕ್ಸ್ ಹೊರಬಿಡಲಾಗಿದ್ದು, ಹಂಪಿಯ ಕೆಲ ಸ್ಮಾರಕಗಳು ಜಲಾವೃತಗೊಂಡಿವೆ.

ಶಿವಮೊಗ್ಗ :
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.

ಚಿಕ್ಕಮಗಳೂರು :
ಜಿಲ್ಲೆಯ ಬಾಳೆಹೊನ್ನೂರು, ಕಳಸ, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರದಲ್ಲೂ ಸಹ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ.ಚಾರ್ಮುಡಿಘಾಟ್‌ನಲ್ಲಿ ಜಲಪಾತಗಳು ಸೃಷ್ಟಿಯಾಗಿದ್ದು, ಹಾಲ್ಗೊರೆಯಂತೆ ಎತ್ತರದಿಂದ ಧುಮ್ಮಿಕ್ಕುತ್ತಿದ್ದು, ಸುಂದರದೃಶ್ಯ ಕಣ್ಣು ಕೋರೈಸುವಂತಿದೆ.ಹಚ್ಚಹಸಿರಾಗಿ ಪ್ರಕೃತಿ ಕಂಗೊಳಿಸುತ್ತಿದ್ದು, ಗಿರಿಸಾಲುಗಳು ಮೋಡಕ್ಕೆ ಮುತ್ತಿಕ್ಕುವಂತೆ ಮಂಜಿನಿಂದ ಕೂಡಿದೆ.

ಈ ರಮಣೀಯ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಅಪಾರಸಂಖ್ಯೆಯಲ್ಲಿ ಪ್ರವಾಸಿಗರು ಕಾಫಿನಾಡಿಗೆ ಆಗಮಿಸುತ್ತಿದ್ದಾರೆ.

RELATED ARTICLES

Latest News