ಬೆಂಗಳೂರು, ಅ.27- ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಕಟ್ಟಡವೊಂದರ ಮೂರನೇ ಮಹಡಿಯಿದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಿಯಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಹಿಳೆಯಾಗಿದ್ದು, ಮಹಡಿಯಿಂದ ಬಿದ್ದ ಹಿನ್ನೆಲೆಯಲ್ಲಿ ಆಕೆಯ ಬೆನ್ನುಮೂಳೆ ಹಾಗೂ ಕಾಲಿಗೆ ಗಂಭೀರ ಪೆಟ್ಟು ಆಗಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ನಿಕ್ಸನ್ ಎಂಬುವವರನ್ನು ಕಳೆದ 7 ವರ್ಷಗಳ ಹಿಂದೆ ಮದುವೆಯಾಗಿದ್ದ ಪ್ರಿಯಾ ಅವರಿಗೆ ಮಕ್ಕಳಿರಲಿಲ್ಲ. ಇತ್ತೀಚೆಗೆ ವೈದ್ಯರ ಚಿಕಿತ್ಸೆಯ ನಂತರ ಅವರಿಗೆ ಹೆಣ್ಣು ಮಗು ಜನಿಸಿತ್ತು. ದಂಪತಿ ಬಾಣಸವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇತ್ತೀಚೆಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು.
ಪತಿಯ ಮದ್ಯವ್ಯಸನದಿಂದ ನೊಂದಿದ್ದ ಪ್ರಿಯಾ ಏಕಾಏಕಿ ಕಳೆದ ರಾತ್ರಿ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತಂತೆ ಬಾಣಸವಾಡಿ ಪೊಲೀಸರು ಪತಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
