ಬೆಳಗಾವಿ,ಜ.2-ಮಗಳ ಮೇಲೆ ಬಲಾತ್ಕಾರ ಮಾಡಲು ಯತ್ನಿಸಿದ ಕಾಮುಕ ಪತಿಯನ್ನು ಕಲ್ಲಿನಿಂದ ಹಲ್ಲೆ ಮಾಡಿ ಕೊಂದ ಪತ್ನಿ ನಂತರ ಶವವನ್ನು ಕತ್ತರಿಸಿ ಪಕ್ಕದ ಜಮೀನಿಗೆ ಎಸೆದ ಭೀಕರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮ್ರಾಣಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶ್ರೀಮಂತ ಇಟ್ನಾಳೆ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಸಾವಿತ್ರಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ನಂತರ, ಶವ ಮನೆಯಲ್ಲಿ ಇದ್ದರೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳಬಹುದೆಂದು ಪತ್ನಿ ಹೆದರಿದ್ದಾಳೆ. ಶವವನ್ನು ಹೊರಗೆ ಸಾಗಿಸುವುದು ಕಷ್ಟ ಎಂದು ಅರಿತು ಶವವನ್ನು ತುಂಡುಗಳಾಗಿ ಕತ್ತರಿಸಿ, ನಂತರ ಚಿಕ್ಕ ಡ್ರಮ್ನಲ್ಲಿ ತುಂಬಿಸಾಗಾಟ ಮಾಡಿ ಪಕ್ಕದ ಗದ್ದೆಯಲ್ಲಿ ಎಸೆದಿದ್ದಾರೆ.
ರಕ್ತ ಸಿಕ್ತವಾಗಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮೈ ಮೇಲಿನ ಬಟ್ಟೆಯನ್ನೆಲ್ಲ ಸುಟ್ಟು ಹಾಕಿ ಅದರ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾರೆ. ಕೊಲೆ ಮಾಡಲು ಬಳಸಿದ್ದ ವಸ್ತು ತೊಳೆದು ತಗಡಿನ ಶೆಡ್ಡಿನಲ್ಲಿ ಬಿಸಾಡಿ ನಂತರ ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿ,ಮಗಳಿಗೆ ನಡೆದ ವಿಚಾರವನ್ನು ಯಾರ ಬಳಿಯೂ ಹೇಳದಂತೆ ತಿಳಿಸಿದ್ದಾರೆ.
ಜಮೀನಿನಲ್ಲಿ ಅಪರಿಚಿತ ಶವ ಕಂಡ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಮೃತರ ಬಗ್ಗೆ ಮಾಹಿತಿ ಕಲೆಹಾಕಿ ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪರಪುರುಷರ ಜೊತೆ ಮಲಗುವಂತೆ ಪೀಡಿಸುತ್ತಿದ್ದ ಗಂಡ ಸದಾ ಜಗಳವಾಡುತ್ತಿದ್ದ. ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸಬೇಕೆಂದು ಕಿರುಕುಳ ನೀಡುತ್ತಿದ್ದ. ಇಷ್ಟೆಲ್ಲಾ ಆದಮೇಲೆ ಪತಿಯು, ಮಗಳನ್ನೂ ಬಿಡದೆ ಬಲಾತ್ಕರಿಸಲು ಯತ್ನಿಸಿದ್ದರಿಂದ ಸಹಿಸಲಾಗದೆ ಕೃತ್ಯ ಎಸಗಿದ್ದಾಗಿ ಆರೋಪಿ ಮಹಿಳೆ ಹೇಳಿದ್ದು, ಪ್ರಸ್ತುತ ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.