ಹಾಸನ, ಮಾ.8 – ಪ್ರಿಯಕರನೊಂದಿಗೆ ಪತ್ನಿ ಪರಾರಿಯಾದ ಹಿನ್ನೆಲೆಯಲ್ಲಿಮನನೊಂದ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ನಡೆದಿದೆ. ಮೂಲತಃ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳೆದ ಆರು ವರ್ಷಗಳ ಹಿಂದೆ ಲಾವಣ್ಯ ಹಾಗೂ ರವಿ ವಿವಾಹವಾಗಿದ್ದು, ಅವರಿಗೆ ಗಂಡು ಮಗುವಿದೆ. ಇತ್ತೀಚೆಗೆ ಕೌಟುಂಬಿಕ ಕಲಹ ಏರ್ಪಟ್ಟು ಪತಿಯನ್ನು ತೊರೆದು ಲಾವಣ್ಯ ಬೇರೆ ವಾಸವಾಗಿದ್ದರು. ಈ ಬಗ್ಗೆ ರವಿ ಪೊಲೀಸ್ ಠಾಣೆಗೂ ದೂರು ನೀಡಿದ್ದ.
ಈ ನಡುವೆ ಆಕೆ ತನ್ನ ಪ್ರಿಯಕರನ ಜತೆ ಹೋಗಿದ್ದಾಳೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಮಾಕವಳ್ಳಿ ಬಳಿಯ ಹೇಮಾವತಿ ನದಿಗೆ ಹಾರಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೇಮಾವತಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಕರಣ ಕುರಿತಂತೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.