ಚಿಕ್ಕಮಗಳೂರು,ಸೆ.7- ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಮಧ್ಯಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು ಪ್ರವಾಸಿಗರಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸಿದೆ.
ಪ್ರವಾಸಿಗರು ವಾಹನ ನಿಲ್ಲಿಸಿ ದೂರದಿಂದಲೇ ರಸ್ತೆಯ ಮಧ್ಯದಲ್ಲೇ ಒಂದೇ ಸ್ಥಳದಲ್ಲಿ ನಿಂತಿದ್ದ ಆನೆಯನ್ನು ವೀಕ್ಷಿಸಿದರು.ಕೆಲವರು ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿಯಲು ಯತ್ನಿಸಿದರೆ, ಇನ್ನೂ ಕೆಲವರು ಭಯದಿಂದ ದೂರ ಸರಿದರು. ಮತ್ತೆ ಕೆಲವರು ಕಾಡಾನೆಯತ್ತ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಬಹಳ ಹೊತ್ತು ರಸ್ತೆಯಲ್ಲಿ ನಿಂತಿದ್ದ ಕಾರಣ ಆ ಮಾರ್ಗದಲ್ಲಿ ಚಲಿಸುವ ವಾಹನಗಳು ಎರಡು ಬದಿ ಸಾಲುಗಟ್ಟಿ ನಿಂತಿದ್ದವು. ಕಾಡಾನೆ ಅರಣ್ಯದತ್ತ ಸಾಗಿದ ನಂತರ ವಾಹನ ಸಂಚಾರ ಪ್ರಾರಂಭಗೊಂಡಿತು.
ಆನೆ ದೀರ್ಘಕಾಲ ಒಂದೇ ಸ್ಥಳದಲ್ಲಿ ನಿಂತಿದ್ದರಿಂದ ಸಂಚಾರಕ್ಕೂ ತೊಂದರೆ ಉಂಟಾಯಿತು. ಚಾರ್ಮುಡಿ ಘಾಟಿಯಲ್ಲಿ ಪದೇ ಪದೇ ಕಾಡಾನೆ ಕಾಣಿಸಿಕೊಳ್ಳುತ್ತಿದ್ದು ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ. ಅನಾಹುತ ಉಂಟಾಗುವ ಮೊದಲು ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ವಾಹನ ಸವಾರರು ಒತ್ತಾಯಿಸಿದ್ದಾರೆ.