Monday, March 31, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / HassanElephant Vikrant : ಕೊನೆಗೂ ಪುಂಡಾಟ ಮೆರೆಯುತ್ತಿದ್ದ ವಿಕ್ರಾಂತ್ ಸೆರೆ, ನಿಟ್ಟುಸಿರು ಬಿಟ್ಟಿ ಸಾರ್ವಜನಿಕರು

Elephant Vikrant : ಕೊನೆಗೂ ಪುಂಡಾಟ ಮೆರೆಯುತ್ತಿದ್ದ ವಿಕ್ರಾಂತ್ ಸೆರೆ, ನಿಟ್ಟುಸಿರು ಬಿಟ್ಟಿ ಸಾರ್ವಜನಿಕರು

wild elephant Vikrant finally caught

ಬೇಲೂರು,21- ಮಲೆನಾಡು ಭಾಗದಲ್ಲಿ ಬೀಡುಬಿಟ್ಟು ಬೆಳೆ ನಾಶದೊಂದಿಗೆ ಪ್ರಾಣ ಹಾನಿಗೂ ಮುಂದಾಗುತ್ತಿದ್ದ ವಿಕ್ರಾಂತ್ ಹೆಸರಿನ ಪುಂಡಾನೆಯನ್ನು ಸತತ ಮೂರು ದಿನಗಳ ಕಾರ್ಯಚರಣೆಯ ನಂತರ ಸಂಜೆ ಬಾಳಗುಲಿ ಸುಪದ ಹುಲ್ಲೆಮಕ್ಕಿ ಗ್ರಾಮದ ತೋಟದಲ್ಲಿ ಹಿಡಿಯುವ ಮೂಲಕ ಅಪರೇಷನ್ ವಿಕ್ರಾಂತ್ ಯಶಸ್ವಿಯಾಗಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಬೆಳೆ ನಾಶದೊಂದಿಗೆ ಪ್ರಾಣ ಹಾನಿಗೆ ಮುಂದಾಗುತ್ತಿದ್ದ ಮೂರು ಪುಂಡಾನೆಗಳನ್ನು ಹಿಡಿಯಲು ಕಳೆದ ಭಾನುವಾರದಿಂದಲೇ ಆರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿ ಮೊದಲ ದಿನವೇ ಯಶಸ್ವಿ ಕಾರ್ಯಚರಣೆ ನಡೆಸಿ ಒಂದು ಕಾಡಾನೆಯನ್ನು ಸೆರೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟು ಬಂದ ನಂತರ ಎರಡನೇ ಪುಂಡಾನೆ ವಿಕ್ರಾಂತ್ ಆನೆ ಹಿಡಿಯಲು ಸಕಲಸಿದ್ದತೆಗಳೊಂದಿಗೆ ಅಧಿಕಾರಿಗಳ ತಂಡ 7 ಸಾಕಾನೆಗಳ ತಂಡದೊಂದಿಗೆ ಮುಂದಾದರು.

ಸತತವಾಗಿ ಎರಡೂ ದಿನಗಳೂ 6 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಕ್ರಾಂತ್ ಆನೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದರಿಂದ ಬರೀ ಕೈಲಿ
ಅರಣ್ಯ ಇಲಾಖೆ ಅಧಿಕಾರಿಗಳು ವಾಪಸ್ಸಾಗಿದ್ದರು. ಮೊನ್ನೆ ಬೆಳಗ್ಗೆಯೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಥರ್ಮಲ್ ಡೋನ್ ಬಳಸಿ ಕಾಡೊಳಗಿದ್ದ ವಿಕ್ರಾಂತ್ ಆನೆಯ ಸುಳಿವು ಪಡೆದು ಸಾಕಾನೆಗಳೊಂದಿಗೆ ಕಾರ್ಯಾಚರಣೆಗಿಳಿದಿದ್ದರು.

ಇನ್ನೇನು ವಿಕ್ರಾಂತ್ ಆನೆ ಒಂಟಿಯಾಯಿತು ಎನ್ನುವಷ್ಟರಲ್ಲಿ ವಿಕ್ರಾಂತ್ ಆನೆಯ ಜತೆಗೆ ದೈತ್ಯಾಕಾರದ ಬೀಮಾ ಆನೆಯೂ ಸೇರಿಕೊಂಡಿದ್ದರಿಂದ ಮತ್ತಷ್ಟು ಆತಂಕಿತರಾದ ಅಧಿಕಾರಿಗಳು ಚರ್ಚಿಸಿ ಮೊದಲು ಭೀಮಾ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ನೆಲ್ಲೆ ಬೀಳಿಸಿ ರೇಡಿಯೋ ಕಾಲರ್ ಅಳವಡಿಸಲು ಮುಂದಾದರು.

ಆದರೆ ಭೀಮಾ ಆನೆ ಇನ್ನೂ ಎಚ್ಚರದಿಂದ ತಲೆಯಾಡಿಸುತ್ತಿದ್ದುದರಿಂದ ರೇಡಿಯೋ ಕಾಲರ್ ಅಳವಡಿಸದೆ, ವೈದ್ಯರು ರಿವರ್ಸಲ್ ಚುಚ್ಚುಮದ್ದು ನೀಡಿ ಹತ್ತಿರಕ್ಕೆ ಹೋಗದೆ ಅದರ ಚಲನವಲನ ಗಮನಿಸುತ್ತಲೇ ಹೊರ ಬಂದರು. ಆದರೆ ಹೇಗಾದರೂ ಮಾಡಿ ವಿಕ್ರಾಂತ್ ಪುಂಡಾನೆಯನ್ನು ಸೆರೆ ಹಿಡಿಯಲೇಬೇಕೆಂದು ಪಣ ತೊಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ವಿಕ್ರಾಂತ್ ಆನೆಯನ್ನು ದೂರಕ್ಕೆ ಓಡಿಸಿದರೂ ಒಂದೆಡೆ ನಿಲ್ಲುತ್ತಿರಲಿಲ್ಲ. ಆದರೂ ವೈದ್ಯರು ಹರ ಸಾಹಸಪಟ್ಟು ಅರಿವಳಿಕೆ ಚುಚ್ಚುಮದ್ದು ನೀಡಿದರು. ಇದರಿಂದ ಸ್ವಲ್ಪ ದೂರ ಓಡಿದ ವಿಕ್ರಾಂತ್ ನೆಲಕ್ಕುರುಳಿತು.

ತಕ್ಷಣವೇ ಸಿಬ್ಬಂದಿ ಸಾಕಾನೆಗಳಾದ ಪ್ರಶಾಂತ, ಕರ್ನಾಟಕ ಭೀಮಾ, ಧನಂಜಯ, ಕಂಜನ್, ಏಕಲವ್ಯ, ಹರ್ಷ ಹಾಗೂ ಮಹೇಂದ್ರ ಆನೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ವಿಕ್ರಾಂತ್ ಆನೆಯನ್ನು ಸೆರೆ ಹಿಡಿದು ನಿಟ್ಟುಸಿರು ಬಿಟ್ಟಿದ್ದಲ್ಲದೆ, ಬಾರಿ ಉಪಟಳ ನೀಡುತ್ತಿದ್ದ ಎರಡು ಪುಂಡಾನೆಗಳನ್ನು ಸೆರೆ ಹಿಡಿದಂತಾಗಿದ್ದು, ಮಲೆನಾಡು ಭಾಗದ ರೈತರು, ಬೆಳೆಗಾರರು, ಕೂಲಿ ಕಾರ್ಮಿಕರು ಕೊಂಚ ಮಟ್ಟಗೆ ಉಸಿರಾಡುವಂತಾಯಿತು.

ಅಲ್ಲದೆ ಇನ್ನೊಂದು ಪುಂಡಾನೆಯನ್ನು ಹಿಡಿಯುವುದರೊಂದಿಗೆ, ಈಗ ಜನರನ್ನು ಅಟ್ಟಾಡಿಸುತ್ತಿರುವ ಭೀಮನಿಗೂ ರೇಡಿಯೋ ಕಾಲರ್ ಅಳವಡಿಸಿದರೆ ಈ ಆನೆ ಇರುವ ಬಗ್ಗೆ ಸಾರ್ವಜನಿಕವಾಗಿ ಎಲ್ಲರಿಗೂ ಮಾಹಿತಿ ಸಿಕ್ಕಂತಾಗಿ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕ್ರಮ ಕೈಗೊಳ್ಳಬೇಕಿದೆ.

ಕಾರ್ಯಚರಣೆಯಲ್ಲಿ ಸಿಸಿಎಫ್ ಐಡು ಕೊಂಡಲ, ಡಿಎಫ್‌ಒ ಸೌರಭ್ ಕುಮಾರ್, ಎಸಿಎಫ್ ಮೋಹನ್ ಕುಮಾರ್, ಖಲಂದರ್, ಮಧುಸೂದನ್, ವಲಯ ಅರಣ್ಯಾಧಿಕಾರಿಗಳಾದ ಯತೀಶ್, ಹೇಮಂತ್, ಇಟಿಎಫ್ ಆ‌ರ್.ಎಫ್‌ಒ ಸುನೀಲ್ ಸೇರಿದಂತೆ ಪಶು ಇಲಾಖೆ ಅಧಿಕಾರಿಗಳು ಮತ್ತು ಮಾವುತರು, ಪೊಲೀಸರು ಸೇರಿದಂತೆ ಸಿಬ್ಬಂದಿ ಇದ್ದರು.

RELATED ARTICLES

Latest News