ಬೇಲೂರು,ಜು.7- ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ಪರದಾಡುವಂತಾಗಿದ್ದು, ಆದಷ್ಟು ಶೀಘ್ರವಾಗಿ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮಲೆನಾಡಿಗರು ಸರ್ಕಾರ ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ಅರೇಹಳ್ಳಿ ಹೋಬಳಿಯ ಜಾಕನಹಳ್ಳಿ, ನೇರಲಕಟ್ಟೆ, ಶಿರಗುರ, ಚೀಕನಹಳ್ಳಿ ಹಾಗೂ ಬಿಕ್ಕೋಡು ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಸಾಕಷ್ಟು ಕಾಡಾನೆಗಳು ಬೀಡು ಬಿಟ್ಟು, ಕಾಫಿ, ಅಡಕೆ, ಬಾಳೆ,ತೆಂಗು, ಶುಂಠಿ ಸೇರಿದಂತೆ ಇತರೆ ಬೆಳೆಗಳನ್ನು ನಾಶ ಪಡಿಸುತ್ತಿವೆ. ಇದರಿಂದ ಈ ಭಾಗದ ಗ್ರಾಮಸ್ಥರು ಬೆಳೆ ನಷ್ಟ ಅನುಭವಿಸುತ್ತಿರುವುದಲ್ಲದೆ, ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ.
ಇತ್ತೀಚಿನ ದಿನಗಳಲ್ಲಂತೂ ನೇರಲಕಟ್ಟೆ, ಕಾನಹಳ್ಳಿ, ಶಿರಗುರ, ಜಾಕನಹಳ್ಳಿ ಭಾಗಗಳಲ್ಲಿ 50 ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟು ಉಪಟಳ ನೀಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎನ್ನುತ್ತಾರೆ ಬೆಳೆಗಾರರು.
ವಿಶೇಷವೆಂದರೆ ಕೆಲ ಗ್ರಾಮಗಳ ಕಾಫಿತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಮತ್ತೊಂದು ತೋಟಕ್ಕೆ ಹೋಗುವ ಸಂದರ್ಭ30 ಕ್ಕೂ ಹೆಚ್ಚು ಆನೆಗಳು ಒಂದರ ಹಿಂದೆ ಇನ್ನೊಂದು ಆನೆ ಸಾಲಿನಲ್ಲಿ ದನಗಳ ರೀತಿ ಬೆಳಗ್ಗೆ ಮತ್ತು ಮದ್ಯಾಹ್ನದ ಸಮಯದಲ್ಲಿ ಸಾಗುತ್ತಿರುವ ದೃಶ್ಯ ಮಲೆನಾಡಿನಲ್ಲಿ ಸಾಮಾನ್ಯವಾಗಿದೆ.
ಇದರಿಂದ ರಸ್ತೆಯಲ್ಲಿ ಬೈಕ್ ಅಥವಾ ಇತರೆ ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಸುತ್ತಾಮುತ್ತಲೂ ಪರಿಶೀಲಿಸಿ ಆನೆಗಳಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡೇ ಮುಂದೆ ಹೋಗುವಂತಾಗಿದ್ದು, ಆದಷ್ಟು ಬೇಗ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ದೂರದ ಕಾಡಿಗೆ ಶಾಶ್ವತವಾಗಿ ಓಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಬೆಳೆಗಾರರು, ಕೂಲಿ ಕಾರ್ಮಿಕರು ಆಗ್ರಹಿಸಿದ್ದಾರೆ.
- ನಾಳೆಯಿಂದ ರಾಜ್ಯಾದ್ಯಂತ ಮಹಾನಗರ ಪಾಲಿಕೆ ನೌಕರರು ಮುಷ್ಕರ
- ಸಚಿವ ಎಂ.ಬಿ.ಪಾಟೀಲ್ಗೆ ಪ್ರಕಾಶ್ ರಾಜ್ ತಿರುಗೇಟು
- ಗೂಢಚಾರ ಆರೋಪದ ಎದುರಿಸುತ್ತಿರುವ ಜ್ಯೋತಿ ಮಲ್ಹೋತ್ರಾಗೆ ಪ್ರಾಯೋಜಕತ್ವ ಆಹ್ವಾನ ನೀಡಿದ್ದ ಕೇರಳ ಸರ್ಕಾರ
- ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಭಾವ, ಬಿತ್ತನೆಗೆ ಹಿನ್ನಡೆ
- ಭಾರತದಲ್ಲಿ ಹಲವು ದಾಳಿಗಳನ್ನು ನಡೆಸಿದ್ದ ಖಲಿಸ್ತಾನಿ ಉಗ್ರ ಪಾಸಿಯಾ ಅಮೆರಿಕದಲ್ಲಿ ಅರೆಸ್ಟ್