ಬೆಂಗಳೂರು,ಫೆ.17- ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರ ಆಗುತ್ತಾ ಎಂದು ಡಿಸಿಎಂ ಶಿವಕುಮಾರ್ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನಿಮಗೆ ಬ್ಯಾಂಡ್ ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನೀವು ಮಾಡಬೇಕಾದ ಕೆಲಸ ಬೇಕಾದಷ್ಟಿದೆ. 660 ಕೋಟಿ ರೂಪಾಯಿ ಖರ್ಚು ಮಾಡಿದರೂ ಬೆಂಗಳೂರು ನಗರದಾದ್ಯಂತ ಇನ್ನೂ ಸಾವಿರಾರು ರಸ್ತೆ ಗುಂಡಿಗಳು ಬಾಯ್ದೆರೆದುಕೊಂಡೇ ಇವೆ.
ಮಾರ್ಚ್ ತಿಂಗಳಿನಿಂದ ಏಪ್ರಿಲ್‌ವರೆಗೂ ಬೇಸಿಗೆ ಕಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಕೆ, ರಸ್ತೆ ರಿಪೇರಿ ಮಾಡೋಕೆ ಒಳ್ಳೆ ಸಮಯ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಮಳೆಗಾಲದಲ್ಲಿ ರಸ್ತೆಗುಂಡಿಗಳು ಮತ್ತೊಮ್ಮೆ ಸಾರ್ವಜನಿಕರಿಗೆ ಮೃತ್ಯುಕೂಪಗಳಾಗುವುದು ಗ್ಯಾರಂಟಿ ಎಂದು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಉಪಮುಖ್ಯಮಂತ್ರಿಗಳಾಗಿ ತಾವು ಎಲ್ಲಿಯೂ ಕಾಣಲೇ ಇಲ್ಲವಲ್ಲ? ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಯಾವ ಯೋಜನೆಗಳು ಬೇಕು, ಅದಕ್ಕೆಷ್ಟು ಅನುದಾನ ಬೇಕಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾದರೂ ಮಾಡಿದ್ದೀರಾ ಅಥವಾ ಕುರ್ಚಿ ಕಿತ್ತಾಟದಲ್ಲಿ ತಮ್ಮ ಕರ್ತವ್ಯವನ್ನೇ ಮರೆತಿದ್ದೀರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗಳಿಗೆ ಡಿಸಿಎಂ ಸಾಹೇಬರ ಅನುಪಸ್ಥಿತಿ ನೋಡಿದರೆ ಬಹುಶಃ ಅವರಿಗೆ ಆಹ್ವಾನವೇ ಇಲ್ಲ ಅನ್ನಿಸುತ್ತೆ ಅಥವಾ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕೇವಲ ನಾಮಕಾವಸ್ತೆ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಅನ್ನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಲೇವಡಿ ಮಾಡಿದ್ದಾರೆ.