ಲಕ್ನೋ, ಜು.27- ನಾವು ಅಧಿಕಾರಕ್ಕೆ ಬಂದ ಕೂಡಲೇ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವೃತ್ತ ಅಗ್ನಿವೀರರಿಗೆ ಮೀಸಲಾತಿ ಘೋಷಿಸಿದ ಮರುದಿನವೇ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವಾಗ, ಇಂಡಿಯಾ ಮೈತ್ರಿಕೂಟದ ಒಂದು ಘಟಕವಾಗಿರುವ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ಅಲ್ಪಾವಧಿಯ ಮಿಲಿಟರಿ ನೇಮಕಾತಿ ಯೋಜನೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು.
ತಮ ಎಕ್‌್ಸ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದ ಅವರು, ನಾವು ಅಧಿಕಾರಕ್ಕೆ ಬಂದ ತಕ್ಷಣ, ದೇಶದ ಭದ್ರತೆಗೆ ರಾಜಿ ಮಾಡಿಕೊಳ್ಳುವ ಮತ್ತು ಸೈನಿಕರ ಭವಿಷ್ಯದ ಜೊತೆ ಆಟವಾಡುವ ಅಲ್ಪಾವಧಿಯ ಅಗ್ನಿವೀರ್ ಸೇನಾ ನೇಮಕಾತಿಯನ್ನು 24 ಗಂಟೆಗಳಲ್ಲಿ ರದ್ದುಗೊಳಿಸಲಾಗುವುದು. ಹಳೆಯ ನೇಮಕಾತಿ (ಮಾದರಿ) ಅನ್ನು ಮರುಸ್ಥಾಪಿಸಬೇಕು ಎಂದು ಹೇಳಿದ್ದರು.
ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿ (ಪಿಎಸಿ) ನೇಮಕಾತಿಗಾಗಿ ಸೇವೆಯಿಂದ ಹಿಂದಿರುಗಿದ ಅಗ್ನಿವೀರ್ಗಳಿಗೆ ಉತ್ತರಪ್ರದೇಶ ಸರ್ಕಾರವು ಆದ್ಯತೆ ನೀಡುತ್ತದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.2022ರಲ್ಲಿ ಕೇಂದ್ರವು 17 ಮತ್ತು 21 ವರ್ಷದ ನಡುವಿನ ಯುವಕರ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿತು. ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ಪ್ರತಿ ಬ್ಯಾಚ್ನಿಂದ 25 ಪ್ರತಿಶತದಷ್ಟು ನೇಮಕಾತಿಗಳನ್ನು ನಿಯಮಿತ ಸೇವೆಯನ್ನು ನೀಡಲಾಗುತ್ತದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಅಥವಾ ಅರೆಸೇನಾ ಪಡೆಗಳಲ್ಲಿ ನೇಮಕಾತಿಗಾಗಿ ಶೇ.10ರಷ್ಟು ಹುದ್ದೆಗಳನ್ನು ಮಾಜಿ ಅಗ್ನಿವೀರರಿಗೆ ಮೀಸಲಿಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿತ್ತು. ಹಲವಾರು ರಾಜ್ಯ ಸರ್ಕಾರಗಳು ತಮ್ಮ ತಮ್ಮ ಪೊಲೀಸ್ ಪಡೆಗಳಲ್ಲಿ ನಿವೃತ್ತ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಇದೇ ರೀತಿಯ ಘೋಷಣೆಗಳನ್ನು ಮಾಡಿತು.