ಬೆಂಗಳೂರು,ಜೂ.23- ಕಾಂಗ್ರೆಸ್ ಶಾಸಕರ ಅಸಮಾಧಾನವನ್ನು ನಾನು ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಪಾಟೀಲ್ ಅವರನ್ನು ರಾಯಚೂರಿಗೆ ಆಗಮಿಸಲು ನಾನು ಕರೆದಿದ್ದೆ. ಆದರೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಹಾಗಾಗಿ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ 25 ಕ್ಕೆ ಬಂದು ತಮನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ನಾನು ಚರ್ಚೆ ಮಾಡುತ್ತೇನೆ ಎಂದರು.
ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರೊಂದಿಗೂ ಚರ್ಚೆ ಮಾಡುತ್ತೇನೆ ಎಂದರು.ಮುಖ್ಯಮಂತ್ರಿಯವರ ವಿಶೇಷ ಅನುದಾನ ಎಂದು ಯಾವುದೂ ಇಲ್ಲ. ಬಜೆಟ್‌ನಲ್ಲಿ ಆ ರೀತಿ ಪ್ರಸ್ತಾಪಗಳಿರುವುದಿಲ್ಲ. ರಾಜು ಕಾಗೆ ಅವರಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನ ಎಂದು ಯಾವ ರೂಪದಲ್ಲಿ ಕೊಡಲಾಗಿದೆಯೋ ಗೊತ್ತಿಲ್ಲ. ಅಗತ್ಯ ಇರುವ ಕಡೆಗೆ ವಿಶೇಷವಾಗಿ ಅನುದಾನ ನೀಡಬೇಕಾಗುತ್ತದೆ. ಆದರೆ ಮುಖ್ಯಮಂತ್ರಿಯವರ ಅನುದಾನ ಎಂದು ಯಾವುದೂ ಇಲ್ಲ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಜಮೀರ್ ಅಹಮದ್ ಖಾನ್‌ರ ರಾಜೀನಾಮೆಗೆ ಒತ್ತಾಯಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಅಸಮಾಧಾನಗಳು ಹೆಚ್ಚುತ್ತಿರುವ ಬಗ್ಗೆ ಸಿಡಿಮಿಡಿ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ಅಸಮಾಧಾನವನ್ನು ನೀವು ಹೋಗಲಾಡಿಸಲು ಸಾಧ್ಯವೇ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರಲ್ಲದೆ, ನಾನು ಕರೆದು ಮಾತನಾಡುತ್ತೇನೆ, ಸಮಾಧಾನಪಡಿಸುತ್ತೇನೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಸಚಿವ ಎಚ್.ಕೆ.ಪಾಟೀಲ್ ಪತ್ರ ಬರೆದು ವಿಶೇಷ ನ್ಯಾಯಾಲಯ ಸ್ಥಾಪಿಸಿ ಬೊಕ್ಕಸಕ್ಕಾಗಿರುವ ನಷ್ಟವನ್ನು ವಸೂಲಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ವಿಷಯ ಚರ್ಚೆ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದರು.ಈ ಹಿಂದೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ನೀಡಿದ್ದರು.
ಅದನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದಾಗ ಸರಿಯಾದ ಉತ್ತರ ಸಿಗಲಿಲ್ಲ. ಚರ್ಚೆಯ ವೇಳೆ ಬಿಜೆಪಿಯ ಶ್ರೀರಾಮಲು, ಜನಾರ್ಧನರೆಡ್ಡಿ ಮತ್ತಿತರರು ನೀವು ಬಳ್ಳಾರಿಗೆ ಬನ್ನಿ, ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸಿದ ನಾನು ನಡೆದುಕೊಂಡೇ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿ ಪಾದಯಾತ್ರೆ ನಡೆಸಿದ್ದಾಗಿ ಸಿದ್ದರಾಮಯ್ಯ ತಿಳಿಸಿದರು.
ಎಚ್.ಕೆ.ಪಾಟೀಲ್‌ರವರ ಪತ್ರ ಕುರಿತು ಚರ್ಚೆ ನಡೆಸುವುದಾಗಿ ಅವರು ಹೇಳಿದರು.
ದೆಹಲಿಗೆ ಭೇಟಿ ನೀಡುತ್ತಿರುವ ತಾವು ಪ್ರಧಾನಮಂತ್ರಿ ಭೇಟಿಗೆ ಸಮಯ ಕೇಳಿದ್ದೇನೆ. 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ವೇಳೆ ಕೆಲ ವಿಷಯಗಳ ಚರ್ಚೆಯಾಗಿವೆ. ಅದರ ಬಗ್ಗೆ ಪ್ರಧಾನಮಂತ್ರಿ ಗಮನ ಸೆಳೆಯಲು ಸಮಯ ಕೇಳಿದ್ದೇನೆ. ರಾಜ್ಯದ ಬಹಳಷ್ಟು ಮಸೂದೆಗಳು ಬಾಕಿ ಇದ್ದು, ಅದರ ಬಗ್ಗೆ ಗಮನ ಹರಿಸಲು ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲು ಸಮಯ ಕೇಳಲಾಗಿತ್ತು. ರಾಷ್ಟ್ರಪತಿಯವರು ನಾಳೆ ಬೆಳಿಗ್ಗೆ 11.20 ಕ್ಕೆ ಸಮಯ ನೀಡಿದ್ದಾರೆ ಎಂದರು.
ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರ ಭೇಟಿ ಮಾಡಿ ಚರ್ಚಿಸಲು ಸಮಯ ಕೇಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡಲು ನಾಳೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈಗಾಗಲೇ ರಾಜ್ಯಸರ್ಕಾರ 5 ಸಾವಿರ ಕೋಟಿ ನೀಡುತ್ತಿದೆ. ಕೇಂದ್ರ ಸರ್ಕಾರವು ವಿಶೇಷ ಅನುದಾನ ನೀಡಬೇಕು ಎಂಬುದು ತಮ ಬೇಡಿಕೆಯಾಗಿದೆ ಎಂದು ತಿಳಿಸಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-07-2025)
- ತುಮಕೂರಿನಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ವಿಗ್ಗಿ, ಜುಮೊಟೊ, ಬಿಂಕ್ಲಿಟ್ ಮಾದರಿಯ ಹೊಸ ಯೋಜನೆ
- ಎಲ್ಲಾ ಪಕ್ಷಗಳ ಶಾಸಕರಿಗೂ ಸಮಾನ ಅನುದಾನ ನೀಡದಿದ್ದರೆ ಉಗ್ರ ಹೋರಾಟ : ಸಿ.ಬಿ.ಸುರೇಶ್ಬಾಬು ಎಚ್ಚರಿಕೆ
- ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಜಪ್ತಿ
- ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರಿಗೆ ಸೂಚನೆ