ಬೆಂಗಳೂರು,ಮಾ.8- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅನ್ನು ಬಿಜೆಪಿ ಹಲಾಲ್ ಬಜೆಟ್ ಎಂದು ವ್ಯಾಖ್ಯಾನಿಸುತ್ತಿರುವುದನ್ನು ಕಾಂಗ್ರೆಸ್ ಪರೋಕ್ಷವಾಗಿ ಸಮ್ಮತಿಸುವ ಮೂಲಕ ಅಲ್ಪಸಂಖ್ಯಾತರ ಮತ ಕ್ರೋಡೀಕರಣಕ್ಕೆ ಬುನಾದಿ ಹಾಕಿಕೊಳ್ಳುತ್ತಿದೆ.
ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ಹಲವಾರು ಚುನಾವಣೆಗಳು ಕಣ್ಣೆದುರಿಗೆ ಇವೆ. ಈ ಹನ್ನೆಲೆಯಲ್ಲಿ ಓಟ್ ಬ್ಯಾಂಕ್ ರಾಜಕಾರಣ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನೀಡುವಂತಹ ಬಹುತೇಕ ಸವಲತ್ತುಗಳನ್ನು ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಆದರೆ ಬಿಜೆಪಿ 2 ಬಿ ವರ್ಗದಲ್ಲಿರುವ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿಕೊಂಡು ಹಲಾಲ್ ಬಜೆಟ್ ಎಂದು ಟೀಕೆ ಮಾಡುವ ಮೂಲಕ ರಾಜಕೀಯ ವ್ಯಾಖ್ಯಾನಕ್ಕೆ ಪ್ರಯತ್ನಿಸುತ್ತಿದೆ. ಚರ್ಚೆಯ ಕಾವು ತೀವ್ರವಾಗುವುದನ್ನು ಕಾಂಗ್ರೆಸ್ ಕಾಯುತ್ತಿದೆ.
ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸಲು ಸದ್ದಿಲ್ಲದೆ ತಯಾರಿ ನಡೆಸಿಕೊಂಡಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬಿಜೆಪಿ ವಾಗ್ದಾಳಿ ಮತ್ತು ಟೀಕೆಗಳನ್ನು ಮಾಡುವುದರಲ್ಲಿ ಹಿಂದುಳಿದ ವರ್ಗಗಳ ಅದರಲ್ಲೂ ಸೂಕ್ಷ್ಮಾತಿಸೂಕ್ಷ್ಮ ಹಾಗೂ ಪ್ರಭಾವಿ ಸಮುದಾಯಗಳಿಗೆ ಸೌಲಭ್ಯ ಸಿಗುವುದನ್ನು ವಿರೋಧಿಸುವಂತೆ ಬಿಂಬಿತವಾಗುತ್ತಿದೆ.
ಕಾಂಗ್ರೆಸ್‌ಗೆ ಬಿಜೆಪಿಯ ಟೀಕೆಗಳು ವರದಾನವಾಗುವ ಸಾಧ್ಯತೆಯಿದೆ. ಸೌಲಭ್ಯಗಳ ಹಂಚಿಕೆಯಲ್ಲಿ ಮುಸ್ಲಿಂ ಸಮುದಾಯವನ್ನು ಮಾತ್ರ ಕೇಂದ್ರೀಕರಿಸಿಲ್ಲ ಎಂಬುದು ಬಜೆಟ್ ನಲ್ಲಿ ಸ್ಪಷ್ಟವಾಗಿದೆ. ಆದರೂ ಬಿಜೆಪಿ ನಾಯಕರು ಪಿಕ್ ಅಂಡ್ ಚೂಸ್ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸದೆ ಕೇವಲ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಸವಲತ್ತುಗಳ ಬಗ್ಗೆಯೇ ಕೇಂದ್ರೀಕರಿಸಿ ಟೀಕೆ ಮಾಡುತ್ತಿರುವುದು ಕಾಂಗ್ರೆಸ್ ನಿರೀಕ್ಷೆಯಂತೆ ರಾಜಕೀಯ ಹಾದಿ ಸಾಗುತ್ತಿದೆ.
ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ ಮತ್ತು 2ಬಿ ಸಮುದಾಯಗಳಲ್ಲಿ ಬರುವ 182 ಕ್ಕೂ ಹೆಚ್ಚು ಜಾತಿ ಹಾಗೂ ಉಪಜಾತಿಗಳಿಗೆ ಇನ್ನು ಮುಂದೆ ಸರ್ಕಾರಿ ಗುತ್ತಿಗೆಯಲ್ಲಿ 2 ಕೋಟಿ ರೂ.ವರೆಗೂ ಸರಕು ಮತ್ತು ಸೇವೆಯಲ್ಲಿ 1 ಕೋಟಿ ರೂ.ವರೆಗೂ ಮೀಸಲಾತಿ ದೊರೆಯುತ್ತಿದೆ. ಇದರಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ಶೇ.4 ರಷ್ಟು. ಕೆಐಎಡಿಬಿಯಲ್ಲಿ ಭೂಮಿ ಮೀಸಲು ಹೊರತುಪಡಿಸಿದರೆ ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಣೆ ಮಾಡಲಾಗಿದೆ.
ಬಿಜೆಪಿ ಹಿಂದೂ ಸಮುದಾಯದ ಮತಗಳನ್ನು ಕ್ರೋಡೀಕರಿಸಲು 2ಬಿ ಗೆ ನೀಡಲಾಗಿರುವ ಸವಲತ್ತುಗಳನ್ನು ಪ್ರಶ್ನೆ ಮಾಡಲು ಆರಂಭಿಸಿದೆ. ಆದರೆ ಟೀಕೆಯ ಭರದಲ್ಲಿ ಕುರುಬ, ಅಗಸ, ಬಲಿಜಿಗ, ಗಾಣಿಗ, ಕ್ಷೌರಿಕ, ಈಡಿಗ, ಯಾದವ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಪ್ರಶ್ನೆ ಮಾಡುತ್ತಿರುವ ಬಗ್ಗೆ ಜಾಣ ಕಿವುಡುತನ ಅನುಸರಿಸಲಾಗುತ್ತಿದೆ.
ಬಿಜೆಪಿಯ ಟೀಕೆಗಳು ಉಚ್ಛಾಯ ಸ್ಥಿತಿಗೆ ತಲುಪಿದಾಗ ಕಾಂಗ್ರೆಸ್ ದಾಖಲೆಗಳ ಸಹಿತ ಜನರ ಮುಂದೆ ಬಂದು ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡಲಿದೆ. ಚುನಾವಣೆ ಸಂದರ್ಭವಾಗಿರುವುದರಿಂದ ಬಿಜೆಪಿಯ ಪ್ರತಿಯೊಂದು ನಡೆಯನ್ನೂ ಕಾಂಗ್ರೆಸ್ ಪಾಳೆಯ ಪಾಲನೆ ಮಾಡುತ್ತಿದೆ.