Monday, October 27, 2025
Homeರಾಜ್ಯಸಂಪುಟ ಪುನಾರಚನೆಗೆ ಸಮ್ಮತಿಸಲಿದೆಯೇ 'ಕೈ'ಕಮಾಂಡ್‌..?

ಸಂಪುಟ ಪುನಾರಚನೆಗೆ ಸಮ್ಮತಿಸಲಿದೆಯೇ ‘ಕೈ’ಕಮಾಂಡ್‌..?

Will the Highcommand agree to the cabinet reshuffle?

ಬೆಂಗಳೂರು, ಅ.27- ರಾಜ್ಯ ರಾಜಕೀಯದಲ್ಲಿ ಯಾವುದೇ ರೀತಿಯ ಕ್ರಾಂತಿ ಇಲ್ಲವೆಂದು ಹೇಳು ತ್ತಿರುವ ನಡುವೆಯೇ ಮುಂದಿನ ಮುಖ್ಯಮಂತ್ರಿ ಹೆಸರಿನಲ್ಲಿ ಪರಸ್ಪರ ಘೋಷಣೆಗಳು ಕೇಳಿ ಬರುತ್ತಿವೆ.

ನಿನ್ನೆ ಆಹಾರ ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು ಮುಂದಿನ ದಲಿತ ಮುಖ್ಯಮಂತ್ರಿ ಮುನಿಯಪ್ಪ ಎಂದು ಘೋಷಣೆ ಕೂಗಿದ್ದಾರೆ. ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಬೆಂಬಲಿಗರು ಇದೇ ರೀತಿಯ ಘೋಷಣೆ ಮೊಳಗಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಹೋದ ಕಡೆಯಲೆಲ್ಲಾ ಮುಂದಿನ ಮುಖ್ಯಮಂತ್ರಿ
ಎಂದು ಘೋಷಣೆ ಕೂಗುವುದು ಸಾಮಾನ್ಯ.

- Advertisement -

ಈಗ ಸಂಪುಟದ ಇತರ ಸಚಿವರ ಹೆಸರಿನಲ್ಲೂ ಘೋಷಣೆಗಳು ಕೇಳಿಬರುತ್ತಿವೆ.
ಕಾಂಗ್ರೆಸ್‌‍ನಲ್ಲಿ ಎಲ್ಲವೂ ಸರಿಯಿದೆ. ಯಾವ ಕ್ರಾಂತಿಯೂ ಇಲ್ಲ ಎಂದು ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಹೇಳಿಕೆ ನೀಡುತ್ತಿದ್ದಾರೆ. ಅದರ ನಡುವೆಯೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯೆಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ. ಸಚಿವ ಸಂಪುಟ ಪುನರ್‌ರಚನೆಯಾಗಿ 12 ಮಂದಿ ಅಧಿಕಾರ ಕಳೆದುಕೊಳ್ಳುತ್ತಾರೆ. ಹೊಸದಾಗಿ 12 ಮಂದಿ ಸಂಪುಟ ಸೇರುತ್ತಾರೆ ಎಂಬ ಚರ್ಚೆಗಳು ವ್ಯಾಪಕವಾಗಿವೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಗಲಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ನಡುವೆ ಸಿದ್ದರಾಮಯ್ಯ ಅವರು ಸಚಿವರ ಜೊತೆ ನಡೆಸಿದ ಭೋಜನ ಕೂಟ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್‌ 1 ರಂದು ಕರೆದಿರುವ ಔತಣ ಕೂಟವು ಕೂಡ ಕುತೂಹಲ ಕೆರಳಿಸಿದೆ.

ನವೆಂಬರ್‌ 5 ಮತ್ತು 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ವರಿಷ್ಠರ ಜೊತೆ ಮಹತ್ವದ ಚರ್ಚೆಗಳಾಗಿದ್ದು, ಸಂಪುಟ ಪುನರ್‌ರಚನೆ ಅಥವಾ ನಾಯಕತ್ವದ ಬದಲಾವಣೆ ಬಗ್ಗೆ ಹೈಕಮಾಂಡ್‌ ಸ್ಪಷ್ಟ ನಿಲುವು ತಿಳಿಸಲಿದೆ ಎಂದು ಹೇಳಲಾಗಿದೆ.

ಸಂಪುಟಕ್ಕೆ ಸೇರಲು ಹಲವಾರು ಮಂದಿ ಶಾಸಕರು ತುದಿಗಾಲ ಮೇಲೆ ನಿಂತಿದ್ದಾರೆ. ಸಿದ್ದರಾಮಯ್ಯ ಕೂಡ ಸಂಪುಟ ಪುನರ್‌ರಚಿಸಿ ಕೆಲವರಿಗೆ ಅವಕಾಶ ನೀಡುವ ಮೂಲಕ ಭಿನ್ನಮತವನ್ನು ತಣಿಸಲು ಆಸಕ್ತಿ ಹೊಂದಿದ್ದಾರೆ. ಆದರೆ ಅದಕ್ಕೆ ಡಿ.ಕೆ.ಶಿವಕುಮಾರ್‌ ಒಪ್ಪುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಒತ್ತಡದಿಂದಾಗಿ ಹೈಕಮಾಂಡ್‌ ಕೂಡ ಸಂಪುಟ ಪುನರ್‌ರಚನೆಗೆ ಸಹಮತಿಸುತ್ತಿಲ್ಲ ಎಂದು ಚರ್ಚೆಗಳಿವೆ.

ಸಂಪುಟ ಪುನರ್‌ರಚನೆಯಾಗಿ ಹೊಸಬರಿಗೆ ಅವಕಾಶ ನೀಡದೆ, ಇರುವ ಸಚಿವರನ್ನೇ ಮುಂದುವರೆಸಿದರೆ ನಾಯಕತ್ವ ಬದಲಾವಣೆ ಬಗ್ಗೆ ಕೂಗು ಹೇಳಬಹುದು. ಇದು ಸಿದ್ದರಾಮಯ್ಯ ಅವರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸುವುದಷ್ಟೇ ಅಲ್ಲದೇ ಪಕ್ಷದ ಏಕತೆಗೂ ಧಕ್ಕೆ ಉಂಟು ಮಾಡುವ ಸಾಧ್ಯತೆಗಳಿವೆ ಎಂಬ ವ್ಯಾಖ್ಯಾನಗಳಿವೆ.

ಸಂಪುಟ ಪುನರ್‌ರಚನೆಗೆ ಅನುಮತಿಸಬೇಕು ಎಂದು ಸಿದ್ದರಾಮಯ್ಯ ಹಲವು ಬಾರಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಸದ್ಯಕ್ಕೆ ಬಿಹಾರ ಚುನಾವಣೆ ಮುಗಿಯುವವರೆಗೂ ಯಾವುದೇ ಬದಲಾವಣೆಗೆ ಅವಕಾಶ ಇಲ್ಲ ಎಂದು ವರಿಷ್ಠರು ತಿಳಿಸಿದ್ದಾರೆ ಎನ್ನಲಾಗಿದೆ.

ನಾಯಕತ್ವದ ಬದಲಾವಣೆಯ ವದಂತಿಗಳಲ್ಲಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪರಮೇಶ್ವರ್‌, ಮುನಿಯಪ್ಪ, ಎಂ.ಬಿ.ಪಾಟೀಲ್‌, ಕೃಷ್ಣಭೈರೇಗೌಡ, ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವು ಮುಖಂಡರ ಹೆಸರುಗಳು ವ್ಯಾಪಕವಾಗಿ ಮುಂಚೂಣಿಗೆ ಬಂದಿವೆ.

ಮುಂದಿನ ಮುಖ್ಯಮಂತ್ರಿ ಮುನಿಯಪ್ಪ ಎಂದು ಕಾರ್ಯಕರ್ತರು ನಿನ್ನೆ ಘೋಷಣೆ ಕೂಗಿದಾಗ, ತಬ್ಬಿಬ್ಬಾದ ಮುನಿಯಪ್ಪ, ಆ ರೀತಿ ಮಾತನಾಡಬೇಡಿ ಎಂದು ಕಾರ್ಯಕರ್ತರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಹುಮಸ್ಸಿನಲ್ಲಿದ್ದ ಕಾರ್ಯಕರ್ತರು ಮುನಿಯಪ್ಪ ಅವರ ಮಾತನ್ನೂ ಲೆಕ್ಕಿಸದೇ ಘೋಷಣೆ ಕೂಗುವುದನ್ನು ಮುಂದುವರೆಸಿದ್ದಾರೆ.

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನರ್‌ರಚನೆಯಾಗಬೇಕು. ಹೊಸಬರಿಗೆ ಅವಕಾಶ ನೀಡಬೇಕೆಂದು ಮೊದಲು ಪ್ರತಿಪಾದಿಸಿದ್ದ ಮುನಿಯಪ್ಪ ಅವರು, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು.

ಇತ್ತೀಚೆಗೆ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ್‌ಖರ್ಗೆ ಅವರು ಕೂಡ ಅಧಿಕಾರ ತ್ಯಾಗದ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಳಿಕವಾದರೂ ಹೈಕಮಾಂಡ್‌ ಸಂಪುಟ ಪುನರ್‌ರಚನೆಗೆ ಅವಕಾಶ ನೀಡಲಿದೆಯೇ? ನಾಯಕತ್ವ ಬದಲಾವಣೆಯಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -
RELATED ARTICLES

Latest News