ಬೆಂಗಳೂರು, ಮಾ.27– ಮ್ಯಾಟ್ರಿಮೋನಿಯಾದಲ್ಲಿ ಪರಿಚಯವಾದ ಮಹಿಳೆಗೆ ಐಎಎಸ್ ಆಗಿರುವುದಾಗಿ ಹೇಳಿ ಮದುವೆಯಾಗುವುದಾಗಿ ನಂಬಿಸಿ 3 ಲಕ್ಷ ಹಣ ಪಡೆದು ವಂಚಿಸಿರುವ ವಂಚಕನಿಗಾಗಿ ಹೆಬ್ಬಾಳ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಭುವನೇಶ್ವರಿ ನಗರದ ನಿವಾಸಿ 40 ವರ್ಷದ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಾ ವೆಬ್‌ಸೈಟ್‌ನಲ್ಲಿ ಹುಡುಗನನ್ನು ಹುಡುಕುತ್ತಿದ್ದರು.
ಆ ಸಂದರ್ಭದಲ್ಲಿ ಜೀವನ್ ಕುಮಾರ್ ಎಂಬಾತನ ಪ್ರೊಫೆಲ್ ನೋಡಿ ಪರಿಚಯಿಸಿಕೊಂಡಿದ್ದು ಆತ ಐಎಎಸ್ ಆಗಿರುವುದಾಗಿ ಹೇಳಿ ಅವರ ವಿಶ್ವಾಸ ಗಳಿಸಿದ್ದಾನೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಮಾತು ಕತೆ ಮುಂದುವರೆದಿದ್ದು, ಫೋನ್ ನಂಬರ್ ಹಾಗೂ ಫೋಟೋಗಳನ್ನು ವಿನಿಮಯಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಾನೆ.
ಕೆಲ ದಿನಗಳ ಬಳಿಕ ಮಹಿಳೆಗೆ ಕರೆ ಮಾಡಿದ ವಂಚಕ ತನ್ನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲು ಹಣ ಬೇಕೆಂದು ಹೇಳಿ 3 ಲಕ್ಷ ಪಡೆದುಕೊಂಡಿದ್ದಾನೆ. ಆದರೆ ಮಹಿಳೆಗೆ ಆತ ಮೋಸ ಮಾಡುತ್ತಿದ್ದಾನೆಂಬುವುದು ಗಮನಕ್ಕೆ ಬಂದಿಲ್ಲ. ಮತ್ತೆ ಸ್ವಲ್ಪ ದಿನಗಳ ಬಳಿಕ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಆತನ ವರ್ತನೆಯಿಂದ ಅನುಮಾನಗೊಂಡ ಮಹಿಳೆ ತನ್ನ ಬಳಿ ಹಣವಿಲ್ಲವೆಂದು ಹೇಳಿದಾಗ, ನೀವು ಹಣ ಕೊಡದಿದ್ದರೆ ನಿಮ್ಮ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ. ಅಲ್ಲದೇ ಒಂದು ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ.
ಮುಂದೇನು ಮಾಡುವುದೆಂದು ತೋಚದೆ ಈ ಮಹಿಳೆ ಪೊಲೀಸರ ಮೊರೆ ಹೋಗಿದ್ದು, ಹೆಬ್ಬಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ. ಈ ವಂಚಕನ ಹೆಸರು ಮಾತ್ರ ಗೊತ್ತಾಗಿದೆ ಆದರೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈತ ಇದೆ ರೀತಿ ದೇಶಾದ್ಯಂತ 10ಕ್ಕೂ ಹೆಚ್ಚು ಮಹಿಳೆಯರಿಗೆ ಮೋಸ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.