ಹೈದರಾಬಾದ್,ಡಿ.5– ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್‌ನ ಕ್ರಾಸೋಡ್‌್ಸನ ಸಂಧ್ಯಾ ಥಿಯೇಟರ್‌ನಲ್ಲಿ ಈ ದುರಂತ ಸಂಭವಿಸಿತು. ದಿಲ್ಸುಖ್ ನಗರದ ರೇವತಿ ಮೃತ ಮಹಿಳೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.
ಥಿಯೇಟರ್ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಮಹಿಳೆ ಮತ್ತು ಅವರ ಮಗ ಭಾರಿ ಜನಸಂದಣಿಯಿಂದ ನೂಕಲ್ಪಟ್ಟಿದ್ದು, ನಂತರ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿರುವುದಾಗಿ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸರು ತಿಳಿಸಿದ್ದಾರೆ.
ರಾತ್ರಿ 10.30 ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು. ಪರಿಣಾಮವಾಗಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಚಿಕ್ಕ ಮಗನ ಸ್ಥಿತಿ ಗಂಭೀರವಾಗಿದೆ.
ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ.ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿತ್ರಮಂದಿರದಲ್ಲಿ ಜಮಾಯಿಸಿದ್ದರು. ಅಲ್ಲು ಅರ್ಜುನ್ ಹಾಗೂ ಚಿತ್ರದ ಇತರ ನಟರ ಆಗಮನದ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ. ಥಿಯೇಟರ್ ಆಡಳಿತ ಕೂಡಾ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಥಿಯೇಟರ್ ಚಿಕ್ಕದಾಗಿದ್ದು, ಇಷ್ಟೊಂದು ಜನಸಂದಣಿಗೆ ಅವಕಾಶ ಕಲ್ಪಿಸಬಾರದಿತ್ತು. ಪೊಲೀಸ್ ಸಿಬ್ಬಂದಿ ಮಹಿಳೆ ಮತ್ತು ಆಕೆಯ ಮಗನಿಗೆ ಸಿಪಿಆರ್ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ಅಲ್ಲಿ ಮಹಿಳೆ ಸಾವನ್ನಪ್ಪಿದ್ದು, ಅವರ ಮಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.