Sunday, November 24, 2024
Homeಬೆಂಗಳೂರುಬೆಂಗಳೂರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಭೀಕರ ಹತ್ಯೆ

ಬೆಂಗಳೂರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಭೀಕರ ಹತ್ಯೆ

ಬೆಂಗಳೂರು, ನ.5- ನಗರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ(37) ಕೊಲೆಯಾಗಿರುವ ಅಧಿಕಾರಿ.

ಸುಬ್ರಮಣ್ಯಪುರ ವ್ಯಾಪ್ತಿಯ ದೊಡ್ಡಕಲ್ಲಸಂದ್ರ, ಕುವೆಂಪು ನಗರದ ಗೋಕುಲ ಅಪಾರ್ಟ್‍ಮೆಂಟ್‍ನ ಪಕ್ಕದಲ್ಲಿರುವ ಮನೆಯೊಂದರಲ್ಲಿ ಪ್ರತಿಮಾ ಅವರು 5 ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಪ್ರತಿಮಾ ಅವರಿಗೆ ಒಬ್ಬ ಮಗನಿದ್ದಾನೆ. ಕೌಟುಂಬಿಕ ಸಮಸ್ಯೆಯಿಂದಾಗಿ ಪತಿಯಿಂದ ದೂರವಿದ್ದ ಪ್ರತಿಮಾ ಅವರು ಒಬ್ಬಂಟಿಯಾಗಿ ಈ ಮನೆಯಲ್ಲಿ ವಾಸವಾಗಿದ್ದರು. ಇವರ ಪತಿ ಹಾಗೂ ಮಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಮಾ ಅವರು ನಿನ್ನೆ ಎಂದಿನಂತೆ ಕೆಲಸಕ್ಕೆ ತೆರಳಿ ರಾತ್ರಿ 8 ಗಂಟೆ ಸುಮಾರಿಗೆ ಸರ್ಕಾರಿ ವಾಹನದಲ್ಲಿ ಮನೆಗೆ ಬಂದಿದ್ದು, ಚಾಲಕ ಇವರನ್ನು ಮನೆ ಬಳಿ ಡ್ರಾಪ್ ಮಾಡಿ ತೆರಳಿದ್ದಾನೆ.
ಪ್ರತಿಮಾ ಅವರು ಮನೆಗೆ ಬರುವುದನ್ನೇ ಕಾದಿದ್ದ ದುಷ್ಕರ್ಮಿಗಳು ಕೆಲವೇ ನಿಮಿಷಗಳಲ್ಲಿ ಇವರ ಮನೆಗೆ ನುಗ್ಗಿ ಚಾಕುವಿನಿಂದ ಪ್ರತಿಮಾ ಅವರಿಗೆ ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಪ್ರತಿಮಾ ಅವರ ಅಣ್ಣ, ಬಿಬಿಎಂಪಿ ಗುತ್ತಿಗೆದಾರರಾಗಿರುವ ಪ್ರತೀಶ್ ಅವರು ಸಹೋದರಿಯ ಮೊಬೈಲ್‍ಗೆ ರಾತ್ರಿ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಎರಡು-ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಬೆಳಗ್ಗೆ ಹೋಗಿ ವಿಚಾರಿಸೋಣ ಎಂದು ಸುಮ್ಮನಾಗಿದ್ದಾರೆ.
ಇಂದು ಬೆಳಗ್ಗೆ ಸಹೋದರಿ ಪ್ರತಿಮಾ ಅವರ ಮನೆಗೆ ಅಣ್ಣ ಪ್ರತೀಶ್ ಬಂದು ನೋಡಿದಾಗಲೇ ಸಹೋದರಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ.

ದೀಪಾವಳಿ ಬೋನಸ್ ರೂಪದಲ್ಲಿ ನೌಕರರಿಗೆ ಬೈಕ್ ಉಡುಗೊರೆ ನೀಡಿದ ಮಾಲೀಕ

ಸ್ಥಳಕ್ಕಾಗಮಿಸಿದ ಸುಬ್ರಮಣ್ಯಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರ ವಾಡ್ ಅವರು ಭೇಟಿ ನೀಡಿದ್ದರು.

ಉದ್ದೇಶಪೂರ್ವಕವಾಗಿ ಮೊದಲೇ ಸಂಚು ರೂಪಿಸಿ ಪ್ರತಿಮಾ ಅವರು ಕಚೇರಿಯಿಂದ ಮನೆಗೆ ಬರುವುದನ್ನೇ ಕಾದಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನನ್ನ ಸಹೋದರಿಯನ್ನು ಯಾರು, ಯಾತಕ್ಕಾಗಿ ಕೊಲೆ ಮಾಡಿದ್ದಾರೆಂಬುದು ಗೊತ್ತಿಲ್ಲ. ಯಾರೇ ಆಗಲಿ ಅವರನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ನನಗಿದೆ ಎಂದು ಸಹೋದರ ಪ್ರತೀಶ್ ತಿಳಿಸಿದ್ದಾರೆ.

ಬೆಂಗಳೂರು ನಗರ ಡಿಸಿ ದಯಾನಂದ್ ಅವರು ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೆಲಸದ ವಿಚಾರದಲ್ಲಿ ಪ್ರತಿಮಾ ಅವರಿಗೆ ಯಾವುದೇ ಅಸಮಾದಾನ ಇರಲಿಲ್ಲ. ಕೆಲಸ ಸಂಬಂಧ ಅವರು ಯಾರ ಬಗ್ಗೆಯೂ ಯಾವುದೇ ಗಂಭೀರ ಆರೋಪ ಮಾಡಿರಲಿಲ್ಲ ಎಂಬುವುದು ಗೊತ್ತಾಗಿದೆ ಎಂದು ತಿಳಿಸಿದರು.

ಮೂರು ತಂಡ ರಚನೆ:
ಹಂತಕರ ಪತ್ತೆಗಾಗಿ ಎಸಿಪಿ ಪವನ್ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಇವರ ಮನೆಯ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ ಅದರಲ್ಲಿ ಸೆರೆಯಾಗಿರುವ ದುಷ್ಕರ್ಮಿಗಳ ಚಹರೆಯನ್ನು ಆಧರಿಸಿ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ಆತಂಕ:
ಒಂಟಿಯಾಗಿದ್ದ ಮಹಿಳಾ ಅಕಾರಿಯ ಕೊಲೆಯಾಗಿರುವ ವಿಷಯ ಬೆಳ್ಳಂಬೆಳ್ಳಗ್ಗೆ ಬೆಳಕಿಗೆ ಬರುತ್ತಿದ್ದಂತೆ ಅಕ್ಕ-ಪಕ್ಕದ ನಿವಾಸಿಗಳು, ಸುತ್ತಮುತ್ತಲಿನ ನಾಗರಿಕರು ಆತಂಕಗೊಂಡಿದ್ದಾರೆ.

RELATED ARTICLES

Latest News