ದೊಡ್ಡಬಳ್ಳಾಪುರ, ನ.13- ಕಾಡುಹಂದಿಯ ಬೇಟೆಯಾಡಲು ಅರಣ್ಯ ಪ್ರದೇಶದಲ್ಲಿ ಇಡಲಾಗಿದ್ದ ನಾಡ ಬಾಂಬ್ ಸ್ಫೋಟಗೊಂಡ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಗುಮನಹಳ್ಳಿ ಸಮೀಪದ ಅರಣ್ಯದಲ್ಲಿ ನಡೆದಿದೆ.
ಘಟನೆಯಲ್ಲಿ ಗುಮನಹಳ್ಳಿ ಗ್ರಾಮದ ರಂಗಮ (45) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಂಗಮ ಅವರು ತಮ ಮೇಕೆಗಳನ್ನು ಮೇಯಿಸಲು ಗ್ರಾಮದ ಹತ್ತಿರದ ಅರಣ್ಯ ಪ್ರದೇಶದ ಹೊರವಲಯಕ್ಕೆ ತೆರಳಿದ್ದ ವೇಳೆ ಮೇಕೆಯೊಂದು ನಾಡ ಬಾಂಬ್ ಕಟ್ಟಿದ್ದ ದಾರಕ್ಕೆ ಸಿಲುಕಿದೆ. ಮೇಕೆಯನ್ನು ಬಿಡಿಸಲು ಯತ್ನಿಸಿದಾಗ ಬಾಂಬ್ ಸ್ಫೋಟಗೊಂಡಿದ್ದು, ರಂಗಮ ಅವರ ಕೈಗೆ ಗಂಭೀರ ಪೆಟ್ಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗಾಯಗೊಂಡ ರಂಗಮ ಅವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಇನ್ಸ್ ಪೆಕ್ಟರ್ ಕಲ್ಲಪ್ಪ ಕರಾತ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
