Thursday, November 6, 2025
Homeಬೆಂಗಳೂರುಇಮೇಲ್‌ ಮೂಲಕ ಶಾಲೆಗೆ ಬಾಂಬ್‌ ಬೆದರಿಕೆ ಹಾಕಿದ್ದ ಮಹಿಳಾ ಟೆಕ್ಕಿ ಅರೆಸ್ಟ್

ಇಮೇಲ್‌ ಮೂಲಕ ಶಾಲೆಗೆ ಬಾಂಬ್‌ ಬೆದರಿಕೆ ಹಾಕಿದ್ದ ಮಹಿಳಾ ಟೆಕ್ಕಿ ಅರೆಸ್ಟ್

Woman Techie, Jailed In Gujarat, Behind Bomb Hoaxes To Bengaluru Schools

ಬೆಂಗಳೂರು,ನ.6- ಇಮೇಲ್‌ ಐಡಿ ಮುಖಾಂತರ ಶಾಲೆಯೊಂದಕ್ಕೆ ಬಾಂಬ್‌ ಹಾಕ್ಸ್ (Bomb Hoaxes) ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳಾ ಟೆಕ್ಕಿಯನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರೆನೆಜೋಶಿಲ್ಡಾ ಬಂಧಿತ ಸಾಫ್ಟ್ ವೇರ್‌ ಇಂಜಿನಿಯರ್‌.

ಕಲಾಸಿಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಪಬ್ಲಿಕ್‌ ಶಾಲೆಯೊಂದರ ಇಮೇಲ್‌ ಐಡಿಗೆ ಜೂ.14ರಂದು ರಾತ್ರಿ 10.15ರ ಸುಮಾರಿನಲ್ಲಿ ಇಮೇಲ್‌ ಸಂದೇಶ ಬಂದಿತ್ತು. ಶಾಲಾ ಪ್ರಾಂಶುಪಾಲರು ಸಂದೇಶ ಗಮನಿಸಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ನಗರದಲ್ಲಿ ದಾಖಲಾಗಿರುವ ಇತರೆ ಹುಸಿಬಾಂಬ್‌ ಕರೆಗಳ ಪ್ರಕರಣಗಳನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂನ ಸಹಾಯಕ ಪೊಲೀಸ್‌‍ ಆಯುಕ್ತರನ್ನು ಮುಖ್ಯ ತನಿಖಾಧಿಕಾರಿಯಾಗಿ ಮತ್ತು ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯ ಇನ್‌ಸ್ಪೆಕ್ಟರ್‌ ಅವರನ್ನು ಸಹಾಯಕ ತನಿಖಾಧಿಕಾರಿಯಾಗಿ ಪ್ರಕರಣಗಳನ್ನು ಸೈಬರ್‌ ಕ್ರೈಂಗೆ ವರ್ಗಾಯಿಸಿ ತನಿಖೆ ಕೈಗೊಳ್ಳಲು ನಗರ ಪೊಲೀಸ್‌‍ ಆಯುಕ್ತರು ಸೂಚಿಸಿದ್ದರು.

ತನಿಖೆ ಮುಂದುವರೆಸಿದ್ದ ಸೈಬರ್‌ಕ್ರೈಂ ಪೊಲೀಸರು ಇಮೇಲ್‌ ಐಡಿ ಮೂಲಕ ಬೆದರಿಕೆವೊಡ್ಡಿದ್ದ ಮಹಿಳೆಯನ್ನು ಗುಜರಾತ್‌ ರಾಜ್ಯದ ಅಹಮದಾಬಾದ್‌ ನಗರದ ಕೇಂದ್ರ ಕಾರಾಗೃಹದಿಂದ ಬಾಡಿವಾರಂಟ್‌ ಮೂಲಕ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ, ಈ ಪ್ರಕರಣವೂ ಸೇರಿದಂತೆ ನಗರದ ಇತರೆ 6 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಆರೋಪಿತೆ ಸಾಫ್ಟ್ ವೇರ್‌ ಇಂಜಿನಿಯರ್‌ ಉದ್ಯೋಗಿಯಾಗಿದ್ದು, ಈಗಾಗಲೇ ಈಕೆ ವಿರುದ್ಧ ಗುಜರಾತ್‌, ಮೈಸೂರು, ತಮಿಳುನಾಡಿನ ಚೆನ್ನೈನಲ್ಲಿಯೂ ಹುಸಿಬಾಂಬ್‌ ಕರೆಗಳ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ.

ಈಕೆ ತನ್ನ ಡಿವೈಎಸ್‌‍ಗಳಿಗೆ ವಿಪಿಎನ್‌ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದು, ಗೇಟ್‌ಕೋಡ್‌ ಎಂಬ ಅಪ್ಲಿಕೇಷನ್‌ ಮೂಲಕ ವರ್ಚ್ಯೂಯಲ್‌ ಮೊಬೈಲ್‌ ನಂಬರ್‌ಗಳನ್ನು ಪಡೆದುಕೊಂಡು ಸುಮಾರು ಆರೇಳು ವಾಟ್ಸಾಪ್‌ ಖಾತೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ತನಿಖೆಯಿಂದ ತಿಳಿದುಬರುತ್ತದೆ.

ಆರೋಪಿತೆಯನ್ನು ತೀವ್ರ ವಿಚಾರಣೆಗೊಳಪಡಿಸಿ ಪುನಃ ಆಕೆಯನ್ನು ಗುಜರಾತ್‌ನ ಅಹಮದಾಬಾದ್‌ ನಗರದ ಕೇಂದ್ರ ಕಾರಾಗೃಹಕ್ಕೆ ವಾಪಸ್‌‍ ಕಳುಹಿಸಲಾಗಿದೆ. ಉತ್ತರ ವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತ ಪವನ್‌, ಇನ್‌ಸ್ಪೆಕ್ಟರ್‌ ಮಂಜು ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News