ಜಮ್ಮು, ಮಾ 3 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಕಚ್ಚಾ ಮನೆ ಕುಸಿದು ಬಿದ್ದ ಪರಿಣಾಮ ತಾಯಿ ಮತ್ತು ಅವರ ಮೂವರು ಪುತ್ರಿಯರು ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಮ್ಮು ಪ್ರದೇಶದ ವಿವಿಧ ಭಾಗಗಳಲ್ಲಿ ಬಲವಾದ ಗಾಳಿ ಮತ್ತು ಆಲಿಕಲ್ಲು ಮಳೆಯಿಂದ ವಸತಿ ಮನೆಗಳು ಸೇರಿದಂತೆ ಡಜನ್‍ಗಟ್ಟಲೆ ಕಟ್ಟಡಗಳು ಹಾನಿಗೊಳಗಾಗಿವೆ.
ರಿಯಾಸಿ ಘಟನೆಯಲ್ಲಿ ಫಲ್ಲೆ ಅಖ್ತರ್ (30), ಅವರ ಪುತ್ರಿಯರಾದ ನಸಿಮಾ (5), ಸಫೀನಾ ಕೌಸರ್ (3) ಮತ್ತು ಸಮ್ರೀನ್ ಕೌಸರ್ (2) ಅವರು ಚಸ್ಸಾನಾ ತಹಸಿಲ್‍ನ ಕುಂದರ್‍ಧನ್ ಮೊಹ್ರಾ ಗ್ರಾಮದಲ್ಲಿ ಭಾರೀ ಮಳೆಯ ನಂತರ ಅವರ ಮನೆ ಕುಸಿದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಕುಟುಂಬದ ಇಬ್ಬರು ಹಿರಿಯ ಸದಸ್ಯರಾದ ಕಾಲು (60) ಮತ್ತು ಅವರ ಪತ್ನಿ ಬಾನೋ ಬೇಗಂ (58) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಕ್ಷಕರು ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದ್ದಿದ್ದಾರೆ.