ಬೆಂಗಳೂರು,ಮಾ.8- ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಂತಹ ಕಠಿಣ ಕೆಲಸ ನೀಡಿದರೂ ಸಹ ಉತ್ತಮವಾಗಿ ಮಾಡುತ್ತಿದ್ದಾರೆ ಎಂದು ನಗರ
ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವ ಮಹಿಳಾ ದಿನಚರಣೆ ಅಂಗವಾಗಿ ಮೈಸೂರು ರಸ್ತೆಯಲ್ಲಿನ ಸಿಎಆರ್ ಕೇಂದ್ರಸ್ಥಾನದಲ್ಲಿ ಇಂದು
ಏರ್ಪಡಿಸಿದ್ದ ವಿಶೇಷ ಮಹಿಳಾ ತುಕಡಿಗಳನ್ನೊಳಗೊಂಡ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಇಲಾಖೆಯಲ್ಲಿ ಪುರುಷ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಾಡುವಂತಹ ಕೆಲಸ ಕಾರ್ಯಗಳನ್ನ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಾಡುವುದಿಲ್ಲ ಎಂಬ ಮನೋಭಾವನೆ ಇತ್ತು. ಈಗ ಅದು ಹೋಗಿದೆ ಎಂದು ಅವರು ಹೇಳಿದರು.ಒಂದು ಸರ್ವೇ ಮಾಡಿದಾಗ ತಮಗೂ ಠಾಣಾ ಬರಹಗಾರರು, ತನಿಖಾ ಸಹಾಯಕರು ಇನ್ನೂ ಮುಂತಾದ ಕೆಲಸಗಳನ್ನು ಕೊಡಬೇಕೆಂದು ಮಹಿಳಾ ಸಿಬ್ಬಂದಿಗಳು ತಿಳಿಸಿದ್ದರು.
ಅದರಂತೆಯೇ ಈಗ ಮಹಿಳಾ ಸಿಬ್ಬಂದಿಗಳಿಗೂ ಸಹ ಎಲ್ಲಾ ಕೆಲಸಗಳನ್ನು ನೀಡಲಾಗುತ್ತಿದೆ. ಇಂದು ಉತ್ತಮ ಕೆಲಸ ಮಾಡಿದಂತಹ 126 ಅಧಿಕಾರಿ ಹಾಗೂ ಗುರುತಿಸಿ ಪ್ರಶಂಸೆ ಪತ್ರವನ್ನು ನೀಡಿರುವುದನ್ನು ನೋಡಿದರೆ ಅವರುಗಳು ಮಾಡಿರುವಂತಹ ಕೆಲಸಗಳು ಮೆಚ್ಚುವಂತಹದ್ದು ಎಂದು ಆಯುಕ್ತರು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಉಚಿತವಾಗಿ ನೀಡಿರುವ 32 ಇ- ಆಟೋಗಳನ್ನು ಮಹಿಳಾ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.