ಬೆಂಗಳೂರು,ಜ.3- ಯಾವುದೇ ಸಂದರ್ಭದಲ್ಲಿ ಮಹಿಳೆಯರು ಪುಂಡರಿಂದ ಸಂಕಷ್ಟಕ್ಕೆ ಒಳಗಾದರೆ ತಕ್ಷಣ 112ಕ್ಕೆ ಕರೆ ಮಾಡಿದರೆ ಪೊಲೀಸರು ಕ್ಷಣಾರ್ಧದಲ್ಲಿ ಸ್ಥಳಕ್ಕೆ ಆಗಮಿಸಿ ನೆರವಾಗುತ್ತಾರೆ. ನಿಮ ಸುರಕ್ಷತೆಯೇ ನಮ ಆದ್ಯತೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ನೀವು ಪ್ರಯಾಣಿಸುವ ಕ್ಯಾಬ್ನಲ್ಲಿ ದಾರಿಮಧ್ಯೆ ಬೇರೆಯವರನ್ನು ಹತ್ತಿಸಿಕೊಂಡು ನಿಮಗೆ ತೊಂದರೆ ನೀಡಿದರೆ 112 ನಂಬರ್ಗೆ ಕರೆ ಮಾಡಿ ತಿಳಿಸಿದಲ್ಲಿ ಕಮಾಂಡ್ ಸೆಂಟರ್ನಿಂದ ವಿಳಾಸ ಮತ್ತು ತೊಂದರೆ ಬಗ್ಗೆ ಆಲಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ನಿಮ ನೆರವಿಗೆ ಕ್ಷಣಾರ್ಧದಲ್ಲಿ ಧಾವಿಸುತ್ತಾರೆ.
ಒಂದು ವೇಳೆ ಸೈಬರ್ ಅಪರಾಧಕ್ಕೆ ಒಳಪಟ್ಟಲ್ಲಿ ತಕ್ಷಣ 1930ಕ್ಕೆ ಕರೆ ಮಾಡಬಹುದಾಗಿದೆ. ನಿಮ ಮೊಬೈಲ್ನಲ್ಲಿ ಕೆಎಸ್ಪಿ ಆ್ಯಪ್ನಲ್ಲಿ ನೀವು ಪ್ರಯಾಣಿಸುತ್ತಿರುವ ರಸ್ತೆಯ ಲೊಕೇಶನ್ ಹಾಕಿದರೆ ತಕ್ಷಣ ಪೊಲೀಸರು ನಿಮ ನೆರವಿಗೆ ಧಾವಿಸುತ್ತಾರೆ. ಹಾಗಾಗಿ ಮಹಿಳೆಯರು ತಮ ಮೊಬೈಲ್ಗಳಲ್ಲಿ ಕೆಎಸ್ಪಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಆಪತ್ಕಾಲದಲ್ಲಿ ಆಧುನಿಕ ತಂತ್ರಜ್ಞಾನವನ್ನು ಕೆಎಸ್ಪಿ ಆ್ಯಪ್ ಪರಿಚಯಿಸಲಾಗಿದೆ.
ಯಾವುದೇ ವ್ಯಕ್ತಿ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ ಮೊಬೈಲ್ ಮೂಲಕವೇ ನೇರವಾಗಿ ಆಡಿಯೋ ಅಥವಾ ವಿಡಿಯೋ ಮೂಲಕ ಸಂಪರ್ಕಿಸಿ ಅಲ್ಲಿ ಆಗುವಂತಹ ವಿದ್ಯಾಮಾನಗಳನ್ನು ತಿಳಿಸಿದರೆ, ಘಟನೆ ಅವಲೋಕಿಸಿ ಪೊಲೀಸರು ತ್ವರಿತವಾಗಿ ಸ್ಪಂದಿಸಲಿದ್ದಾರೆ ಮತ್ತು ಸಂಪೂರ್ಣ ರಕ್ಷಣೆ ಕೊಡಲಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಸೇಫ್ಟಿ ಲ್ಯಾಂಡ್: ದಾರಿನಲ್ಲಿ ಒಂಟಿಯಾಗಿ ನಡೆದು ಹೋಗುವಾಗ ನಿಮಗೆ ಯಾರಾದರೂ ತೊಂದರೆ ನೀಡಿದರೆ, ಒಂದು ವೇಳೆ ಮೊಬೈಲ್ ಇಲ್ಲದಿದ್ದರೆ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸೇಫ್ಟಿ ಲ್ಯಾಂಡ್ ಬಳಿ ಹೋಗಿ ಒಂದು ಬಟನ್ ಒತ್ತಿದರೆ ಕಮಾಂಡ್ ಸೆಂಟರ್ಗೆ ಕೂಡಲೇ ಅಲರಾಂನಿಂದ ಮಾಹಿತಿ ಹೋಗುತ್ತದೆ. ಕೂಡಲೇ ಕಮಾಂಡ್ ಸೆಂಟರ್ನ ನಮ ಸಿಬ್ಬಂದಿ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ಆಗ ಅವರು ನಿಮ ನೆರವಿಗೆ ಬರುತ್ತಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ನಗರದ ಆಯ್ದ 50 ಕಡೆಗಳಲ್ಲಿ ಸೇಫ್ಟಿ ಲ್ಯಾಂಡ್ ಅಳವಡಿಸಲಾಗಿದ್ದು, ಅದರ ಉಪಯೋಗದಿಂದ ಭದ್ರತೆ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ವುಮೆನ್ ಸೇಫ್ಟಿ: ದಾರಿಯಲ್ಲಿ ನಿಮ ಜೊತೆ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ತಕ್ಷಣ 112ಕ್ಕೆ ಕರೆ ಮಾಡಿ ಅಲ್ಲಿನ ವಿಳಾಸ ತಿಳಿಸಿದರೆ ಲೊಕೇಶನ್ ಆಧರಿಸಿ ಕ್ಷಣಾರ್ಧದಲ್ಲಿ ಪೊಲೀಸರು ಬರುತ್ತಾರೆ. ಬೆಂಗಳೂರು ನಗರ ಪೊಲೀಸರು ಸದಾ ನಿಮ ಸೇವೆಗೆ ಸಿದ್ದರಾಗಿದ್ದಾರೆ, ತ್ವರಿತವಾಗಿ ಬಂದು ಸಮಸ್ಯೆ ಬಗೆಹರಿಸುತ್ತಾರೆ. ಮಹಿಳೆಯರ ಸುರಕ್ಷತೆಯೇ ನಮ ಆದ್ಯತೆ ಎಂದು ಅವರು ತಿಳಿಸಿದ್ದಾರೆ.