ಬೆಳಗಾವಿ,ಸೆ.8- ಕಾಂಗ್ರೆಸ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ತಾವು ಸ್ವಾಗತಿಸುವುದಾಗಿ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಯಾರೇ ಮುಖ್ಯಮಂತ್ರಿಯಾದರೂ ಅದನ್ನು ನಾನು ಸ್ವಾಗತಿಸುತ್ತೇನೆ. ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೇ ಮುಖ್ಯಮಂತ್ರಿಯಾದರೂ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿದ್ದ ಲಕ್ಷ್ಮಣ್ ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಲಸೆ ಬಂದರು. ಗೆದ್ದ ಒಂದೇ ದಿನದಲ್ಲಿ ಕಾಂಗ್ರೆಸಿಗರು ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರು. ಅವರು ಗೆಲುವು ಕೂಡ ಕಂಡರು. ಈಗಾಗಲೇ ಕಾಂಗ್ರೆಸ್‌ನಲ್ಲಿ ಹಲವು ಹಿರಿಯ ನಾಯಕರಾಗಿರುವುದರಿಂದ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ದೊರೆಯಲಿಲ್ಲ.
ಬದಲಾಗಿ ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಂಪುಟದ ಸದಸ್ಯರಾಗಿದ್ದಾರೆ. ಈ ಕುರಿತ ಅಸಮಾಧಾನ ಲಕ್ಷ್ಮಣ್ ಸವದಿ ಅವರಲ್ಲಿ ಮಡುಗಟ್ಟಿದೆ ಎಂದು ಹೇಳಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕ ಕಾಂಗ್ರೆಸ್ ಅಭ್ಯರ್ಥಿಯಾದಾಗ ಬೆಳಗಾವಿಯ ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯ ಲೀಡ್ ಬಂದಿತ್ತು. ಆದರೆ ಅಥಣಿ ಕ್ಷೇತ್ರದಲ್ಲಿ ಹಿನ್ನಡೆಯಾಗಿತ್ತು. ಈ ಬಗ್ಗೆ ಸತೀಶ್ ಜಾರಕಿಹೊಳಿ ಬಹಿರಂಗ ಹೇಳಿಕೆ ನೀಡಿ ಲಕ್ಷ್ಮಣ್ ಸವದಿ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ಚುನಾವಣೆಯ ಕಾಲದಲ್ಲಿ ಡಿ.ಕೆ.ಶಿವಕುಮಾರ್ ಆಪರೇಷನ್ ಹಸ್ತ ನಡೆಸಿ ಲಕ್ಷ್ಮಣ್ ಸವದಿಯನ್ನು ಕಾಂಗ್ರೆಸ್‌ಗೆ ಕರೆತಂದರು. ಇದು ಸತೀಶ್ ಜಾರಕಿಹೊಳಿ ಅವರಿಗೆ ಇಷ್ಟ ಇರಲಿಲ್ಲ ಎಂಬ ಚರ್ಚೆಗಳಿವೆ. ಆ ನಂತರವೂ ಇಬ್ಬರ ನಡುವೆ ರಾಜಕೀಯವಾಗಿ ಅಷ್ಟಕ್ಕಷ್ಟೇ ಎಂಬ ವಾತಾವರಣವಿದೆ.
ಇದರ ನಡುವೆ ಸತೀಶ್ ಜಾರಕಿಹೊಳಿ ತೆರೆಮರೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಟವಲ್ ಹಾಕಿದ್ದಾರೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ, ಜಿಲ್ಲೆಯಿಂದ ಯಾರೇ ಮುಖ್ಯಮಂತ್ರಿಯಾದರೂ ನನ್ನ ಬೆಂಬಲ ಇದೆ ಎಂದಿದ್ದಾರೆ.