ಮೈಸೂರು,ಜ.3– ಮುಡಾ ಹಾಗೂ ವಾಲೀಕಿ ಹಗರಣಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿದ್ದು, ತನಿಖೆ ನಡೆಯುತ್ತಿದೆ. ಈ ಸಮಯದಲ್ಲಿ ಮೈಸೂರಿನ ಕೆಆರ್‌ಎಸ್ ರಸ್ತೆಗೆ ಅವರ ಹೆಸರನ್ನು ಇಡಲು ಮುಂದಾಗಿರುವುದು ಎಷ್ಟು ಸೂಕ್ತ ಎಂದು ಕಾಂಗ್ರೆಸ್‌ನವರೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಅವರು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅಸಾದ್ ಉರ್ ರಹಮಾನ್ ಶರೀಫ್ ಭೇಟಿ ಮಾಡಿ ಕೆಆರ್‌ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂಬ ಹೆಸರು ಹಿಂದಿನಿಂದಲೂ ಇದೆ ಇದಕ್ಕೆ ದಾಖಲೆಗಳೊಂದಿಗೆ ಮನವಿ ಪತ್ರ ಸಲ್ಲಿಸಿದ್ದು ಪರಿಶೀಲನೆ ನಡೆಸಬೇಕು ಎಂದು ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಡೆಯರ್, ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿರುವ ಬಗ್ಗೆ ಯಾವುದೇ ದಾಖಲಾತಿಗಳು ಪಾಲಿಕೆಯಲ್ಲಿ ಇಲ್ಲ ಎಂದು ಆಯುಕ್ತರು ಹೇಳಿದ್ದರು. ಇದಕ್ಕೆ ನಾವೇ ಆ ರಸ್ತೆಗೆ ಹಿಂದಿನಿಂದಲೂ ಪ್ರಿನ್‌್ಸ ರಸ್ತೆ ಇತ್ತು ಎಂಬ ಬಗ್ಗೆ ದಾಖಲೆಗಳನ್ನು ಸಂಗ್ರಹ ಮಾಡಿ ಕೊಟ್ಟಿದ್ದೇವೆ.
ಈ ಬಗ್ಗೆ ಆಯುಕ್ತರು ಪುನರ್ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಆ ಭಾಗದ ಆಧಾರ್ ಕಾರ್ಡ್, ರೈಲ್ವೆ ಮ್ಯೂಸಿಯಂ, ಎಲ್ಲ ಕಡೆ ಪ್ರಿನ್ಸಸ್ ರಸ್ತೆ ಅಂತ ಇದೆಯೆಂದು ದಾಖಲೆಗಳಿವೆ. ಅದನ್ನು ನೀಡಿದ್ದೇವೆ ಒಡೆಯರ್ ಎಂದು ಹೇಳಿದರು.