ಹಾಸನ,ಮಾ.4- ಚಲನಚಿತ್ರ ನಟರು ಮತ್ತು ಕಲಾವಿದರು ಸಾಮಾನ್ಯ ನಾಗರಿಕರೇ. ಅವರು ಹೋರಾಟದಲ್ಲಿ ಪಾಲ್ಗೊಳ್ಳಬೇಕೋ, ಬೇಡವೋ ಎಂಬುದನ್ನು ಅವರೇ ತೀರ್ಮಾನಿಸಬೇಕು ಇದನ್ನು ಪ್ರಶ್ನಿಸುವುದು ಸೂಕ್ತವಲ್ಲ ಎಂದು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಿತ್ರನಟರಿಗೆ ನೀಡಿರುವ ಎಚ್ಚರಿಕೆ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷದವರು ಹೋರಾಟ ನಡೆಸಿದರೆ ಅವರ ಪಕ್ಷದ ಕಾರ್ಯಕರ್ತರೆಲ್ಲಾ ಸೇರಿ ಹೋರಾಟ ಮಾಡುತ್ತಾರೆ ಆದರೆ ಚಲನಚಿತ್ರ ನಟರು ನಿರ್ದೇಶಕರು ಹಾಗೂ ಆ ಕ್ಷೇತ್ರದವರು ಪಕ್ಷಾತೀತರಾಗಿರುತ್ತಾರೆ. ಹಾಗಾಗಿ ಅವರನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ಕುರಿತು ಆಡಳಿತದಲ್ಲಿ ಇರುವವರು ತೀರ್ಮಾನಿಸಬೇಕು. ಅದು ಕಾಂಗ್ರೆಸ್ ಪಕ್ಷದ ಆಂತರಿಕ ಸಮಸ್ಯೆಯಾಗಿದ್ದು ಅದರ ಬಗ್ಗೆ ಬಿಜೆಪಿ ಸಂಸದನಾದ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಆ ಪಕ್ಷದ ನಾಯಕರನ್ನೆ ಕೇಳಬೇಕು ಎಂದರು. ರಾಜ್ಯದಲ್ಲಿ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ಕುರಿತಂತೆ ಕಾಂಗ್ರೆಸ್ ಸರ್ಕಾರ ಮಾಡಿರುವ ಟೀಕೆಗಳ ಬಗ್ಗೆ ಮಾತನಾಡಿ, ಆಡಳಿತವೈಫಲ್ಯ ಮುಚ್ಚಿ ಹಾಕಲು ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೃಹ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ವಿಂಗಡಣೆ ಹಾಗೂ ಕಡಿಮೆಯಾಗುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದರು.
ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಹೇಳಿಕೆ ಸರಿಯಲ್ಲ ಕಾನೂನಾತಕವಾಗಿ ಎಲ್ಲಾ ರಾಜ್ಯಗಳಿಗೂ ಸಮನಾಗಿ ತೆರಿಗೆ ಹಂಚಿಕೆಯಾಗುತ್ತಿದೆ. ಜಿಎಸ್‌ಟಿ ಹಂಚಿಕೆಯಲ್ಲಿನ ಲೋಪ ಕುರಿತು ರಾಜ್ಯ ಸರ್ಕಾರ ಸಮರ್ಥವಾಗಿ ಕೇಂದ್ರದಲ್ಲಿ ವಾದ ಮಂಡಿಸಬೇಕಿದೆ ಅದನ್ನು ಬಿಟ್ಟು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಯದುವೀರ್ ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಬೆಳ್ಳಿ ಗಂಗಾಧರ್, ಅರುಣ್ ಕುಮಾರ್, ಪರ್ವತಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಎಸ್ ಪಿ ಲಿಂಬ್ಯ ನಾಯಕ್, ಗಿರೀಶ್, ರೇಣು ಕುಮಾರ್ ಇತರರು ಇದ್ದರು.