ಬೆಂಗಳೂರು,ಜ.8- ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಸೂರಣಗಿ ಗ್ರಾಮದಲ್ಲಿ ನಟ ಯಶ್ ಕಟೌಟ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್‍ಸ್ಪರ್ಶದಿಂದಾಗಿ ಮೂವರು ಅಭಿಮಾನಿಗಳು ಮೃತಪಟ್ಟ ಬಳಿಕ ಫ್ಲೆಕ್ಸ್, ಬ್ಯಾನರ್, ಕಟೌಟ್‍ಗಳ ಎತ್ತರ, ಆಕಾರ, ಅಳತೆಗಳ ಬಗ್ಗೆ ಮಾರ್ಗಸೂಚಿ ನಿಗದಿ ಮಾಡುವ ಕುರಿತಂತೆ ಚರ್ಚೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಲು ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲು ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ ಎಂದು ಹೇಳಿದರು.
ಈ ನಡುವೆ ನಟ ಯಶ್ ಅವರು ತಮ್ಮೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದು, ಸ್ಥಳಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಶ್ ಕೂಡಾ ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ನಿರೀಕ್ಷೆಗಳಿವೆ ಎಂದು ಸಚಿವರು ತಿಳಿಸಿದರು. ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎತ್ತರದ ಫ್ಲೆಕ್ಸ್ ಮಾಡಿಸಿ ಅದರಲ್ಲಿ ರಾಡ್ ಅಳವಡಿಸಲಾಗಿದ್ದು, ಅದು ವಿದ್ಯುತ್ ತಂತಿಗೆ ತಗುಲಿದ್ದರಿಂದ ಮೂವರು ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದು, ಉಳಿದ ಮೂವರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ.
ಅವರಲ್ಲಿ ಒಬ್ಬ ಗುಣಮುಖನಾಗುತ್ತಿದ್ದಾನೆ. ಉಳಿದಿಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ನೆರವು ನೀಡಿದ್ದಾರೆ. ಘಟನೆ ದುರ್ದೈವಕರ. ಮೃತಪಟ್ಟವರೆಲ್ಲಾ 15 ರಿಂದ 20 ವರ್ಷದೊಳಗಿನವರು. ಬಡ ಕುಟುಂಬದ ಪರಿಶಿಷ್ಟ ಜಾತಿಯ ಯುವಕರು ಮೃತಪಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳ ಸಾವು
ಆಸ್ಪತ್ರೆಯಲ್ಲಿರುವವರಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗುವುದು. ಕಟೌಟ್, ಫ್ಲೆಕ್ಸ್, ಬ್ಯಾನರ್‍ಗಳ ಬಗ್ಗೆ ಈವರೆಗೂ ಯಾವುದೇ ನಿಯಮಾವಳಿಗಳಿಲ್ಲ. ಎತ್ತರದ ಕಟೌಟ್‍ನಿಂದಾಗಿಯೇ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಕುರಿತು ಚರ್ಚೆ ನಡೆಸಲು ಇದು ಸೂಕ್ತ ಸಂದರ್ಭವಾಗಿದೆ. ಹೀಗಾಗಿ ರಾಜ್ಯಸರ್ಕಾರ ಸ್ಪಷ್ಟ ಮಾರ್ಗಸೂಚಿಗಳ ಬಗ್ಗೆ ಚಿಂತನೆ ನಡೆಸಲಿದೆ ಎಂದು ತಿಳಿಸಿದರು.
ಬೆಳಗಾವಿ ಎಂದಿಗೂ ಮಹಾರಾಷ್ಟ್ರಕ್ಕೆ ಸೇರಿರಲಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿರಬಹುದು ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು. ಭಾಷಾವಾರು ಪ್ರಾಂತ್ಯ ವಿಂಗಡಣೆಗೂ ಮೊದಲು ಮುಂಬೈ ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಆಗ ಬೆಳಗಾವಿ ಸೇರಿದಂತೆ ರಾಜ್ಯದ ಹೈದ್ರಾಬಾದ್ ಕರ್ನಾಟಕವೂ ಸೇರಿದಂತೆ ಹಲವು ಪ್ರದೇಶಗಳು ಮುಂಬೈ ಪ್ರಾಂತ್ಯದ ಭಾಗವಾಗಿದ್ದವು. ಏಕೀಕರಣದ ಬಳಿಕ ರಾಜ್ಯ ವಿಂಗಡಣೆಯಾದಾಗ ಬೆಳಗಾವಿ ಕರ್ನಾಟಕದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿರುವ ಸಾಧ್ಯತೆಗಳಿವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.