ಬೆಂಗಳೂರು,ಮಾ.28- ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿರುವ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಬಿಜಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಕರಣದಿಂದ ಬಿಜೆಪಿಗೆ ಭದ್ರ ಬುನಾದಿಯಾಗಿದ್ದ ಪಂಚಮಸಾಲಿ ಸಮುದಾಯದ ಮತಗಳು ಕೈ ತಪ್ಪುವ ಭೀತಿ ಎದುರಾಗಿದೆ.
ಹಳ್ಳಿಯಿಂದ ದಿಲ್ಲಿಯವರೆಗೂ ನಡೆಯಲಿರುವ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಸಮುದಾಯವೇ ಪಂಚಮಸಾಲಿಗಳು. ವಿಶೇಷವಾಗಿ ಕಲ್ಯಾಣ ಕರ್ನಾಟ ಭಾಗದ ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್ ವಿಜಾಪುರ, ಕಲಬುರಗಿ ವಿಜಯನಗರ ಹಾಗೂ ಕಲ್ಯಾಣ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗಾ ಕೆಲವು ಭಾಗಗಳಲ್ಲಿ ಇವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಸಮಿಶ್ರ ಸರ್ಕಾರ ಅಧಿಕಾರ ವಿಚ್ಛೇಧನ ಹಂತಕ್ಕೆ ಬಂದು, ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಬಿ.ಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೇ ಇದ್ದಾಗ ವಚನ ಭ್ರಷ್ಟ ಆರೋಪದ ಮೇಲೆ ಬಿಜೆಪಿ ವೀಶಶೈವ – ಲಿಂಗಾಯಿತ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವೀಯಾಗಿತ್ತು.
ಆವರೆಗೂ ಒಬ್ಬ ಸಾಮಾನ್ಯ ನಾಯಕನಾಗಿದ್ದ ಯಡಿಯೂರಪ್ಪ, ಇದ್ದಕ್ಕೀದ್ದಂತೆ ವೀರಶೈವ ಸಮುದಾಯದ ಪ್ರಭಾವಿ ನಾಯಕನಾಗಿ ಹೊರ ಹೊಮ್ಮಿದ್ದು ಇದೇ ಕಾಲ ಘಟ್ಟದಲ್ಲಿ. ಅಂದಿನಿಂದ 2023 ರ ವಿಧಾನಸಭಾ ಚುನಾವಣೆವರೆಗೂ ಈ ಸಮುದಾಯ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದು ಗುಟ್ಟಾಗಿ ಉಳಿದಿಲ್ಲ. ಆದರೆ, ಕೇಂದ್ರ ಬಿಜೆಪಿ ವರಿಷ್ಟರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಇದೇ ಸಮುದಾಯ ಕಾಂಗ್ರೆಸ್ ಕಡೆ ಸ್ವಲ್ಪ ಮಟ್ಟದಲ್ಲಿ ವಾಲಿತ್ತು. ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಸಮುದಾಯದ ಮತಗಳನ್ನು ಸೆಳೆಯವಲ್ಲಿ ಪುನಃ ಯಶಸ್ವಿಯಾಗಿತ್ತು.
ಇದೀಗ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕನಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಆರು ವರ್ಚಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ನಿರ್ದಾಕ್ಷಿಣ್ಯವಾಗಿ ಉಚ್ಛಾಟನೆ ಮಾಡಿದೆ. ಇದು ಬರುವ ದಿನಗಳಲ್ಲಿ ಕಮಲ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಲಿದಿಯೇ ಎಂಬ ಚರ್ಚೆ ರಾಜಕೀಯ ಪಡ ಸಾಲಿಯಲ್ಲಿ ಆರಂಭವಾಗಿದೆ.
ಯತ್ನಾಳ್ ಉಚ್ಛಾಟನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡುಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರುಗಳ ಚಿತಾವಣೆಯೇ ಪ್ರಮುಖ ಕಾರಣ ಎಂದು ಪಂಚಮಸಾಲಿ ಸಮುದಾಯದ ಜಯ ಮೃತ್ಯುಂಜಯ ಸ್ವಾಮೀಜಿ ನೇರವಾಗಿ ಆರೋಪ ಮಾಡಿದ್ದಾರೆ. ಸಾಲದ್ದಕ್ಕೆ ನಮ್ಮ ಸಮುದಾಯದ ಶಾಸಕರು ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರ ಬರವಂತೆಯೂ ಕರೆಕೊಟ್ಟಿದ್ದಾರೆ.
ಯತ್ನಾಳ್ ಅವರ ಉಚ್ಛಾಟನೆಯನ್ನು ಕೇಂದ್ರ ಬಿಜೆಪಿ ವರಿಷ್ಟರು ಹಿಂಪಡೆಯದಿದ್ದರೆ, ಇಡೀ ಪಂಚಮಸಾಲಿ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸದೆ ಎಂದು ಎಚ್ಚರಿಕೆಯನ್ನು ಕೊಟ್ಟಿರುವುದು ಬಿಜೆಪಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ಯತ್ನಾಳ್ ಉಚ್ಛಾಟನೆಯಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಹೋಗಿ ಬಿಡುತ್ತಾ? ನಾಳೆಯಿಂದಲೇ ಬಣಮುಕ್ತ ಬಿಜೆಪಿ ಆಗಿ ಬಿಡುತ್ತಾ? ಹೀಗೆಂಬ ಪ್ರಶ್ನೆಗಳಿಗೆ ಇಲ್ಲ ಎಂಬ ಉತ್ತರಗಳೇ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.
ಹೈಕಮಾಂಡ್ ತೀರ್ಮಾನ ರಾಜ್ಯದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟವೇ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಹಿರಿಯ ನಾಯಕರು ಮತ್ತು ಬಣ ಬಡಿದಾಟದಲ್ಲಿ ತೊಡಗಿರುವ ನಾಯಕರನ್ನು ಒಂದೆಡೆ ಸೇರಿಸಿ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಕೆಲಸವನ್ನು ಹೈಕಮಾಂಡ್ ನಾಯಕರು ಮಾಡಬಹುದಿತ್ತು.ಆದರೆ ಅದ್ಯಾವುದನ್ನೂ ಮಾಡದೆ ಉಚ್ಛಾಟನೆಯನ್ನು ಮಾಡಿ ಬಿಟ್ಟರೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತಾಯಿತಾ? ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಕಥೆ ಊರು ಬಾಗಿಲಾಗಿದೆ. 2023ರ ವಿಧಾನ ಸಭಾ ಚುನಾವಣೆ ಬಳಿಕ ಪಕ್ಷ ದುರ್ಬಲವಾಗುತ್ತಾ ಹೋಗುತ್ತಿದೆ. ಜತೆಗೆ ನಾಯಕಗಳ ನಡುವಿನ ಅಸಮಾಧಾನಗಳು ಪಕ್ಷ ಸಂಘಟನೆಗೆ ಮಾರಕವಾಗುತ್ತಿದೆ. ಅದರಲ್ಲೂ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಹಲವು ಹಿರಿಯ ನಾಯಕರು ತಮಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷ ಸಂಘಟನೆಯಲ್ಲಿ ಆಸಕ್ತಿಯನ್ನೇ ಕಳೆದು ಕೊಂಡಿದ್ದಾರೆ.
2021ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ತಂದ ಹೈಕಮಾಂಡ್ ಆ ನಂತರದ ಬೆಳವಣಿಗೆಯಿಂದ ಬೆಚ್ಚಿ ಬಿದ್ದಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಾಗ ಎಚ್ಚೆತ್ತುಕೊಂಡ ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಿಂದ ದೂರವಿಟ್ಟ ಪರಿಣಾಮ ರಾಜ್ಯದಲ್ಲಿ ಸೋಲು ಕಾಣುವಂತಾಯಿತು. ಹೀಗಾಗಿ ಪಕ್ಷದಿಂದ ದೂರ ಹೋದ ಲಿಂಗಾಯಿತ ಮತವನ್ನು ಮತ್ತೆ ಸೆಳೆದುಕೊಳ್ಳಲು ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಯಿತು.
ಇಲ್ಲಿ ಆಗಿದ್ದೇ ಬೇರೆ ಹೈಕಮಾಂಡ್ ಏನು ಅಂದುಕೊಂಡಿತ್ತೋ ಅದು ಉಲ್ಟಾ ಆಗಿತ್ತು. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದನ್ನು ಮೊದಲಿಗೆ ವಿರೋಧಿಸಿದವರೇ ಲಿಂಗಾಯತ ನಾಯಕರು. ಅವತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೊಡ್ಡ ಮಟ್ಟದಲ್ಲಿ ಆಕಾಂಕ್ಷಿಗಳಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಸುನೀಲ್ ಕುಮಾರ್ ಹೀಗೆ ಹಲವರು ತೆರೆಮರೆಯ ಪ್ರಯತ್ನ ನಡೆಸಿದ್ದರು. ಆದರೆ ಯಾರಿಗೂ ಸೊಪ್ಪು ಹಾಕದ ಹೈಕಮಾಂಡ್ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಿತ್ತು.
ಇದು ಹಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾದರೂ ಕೆಲವರು ಹೊರಗೆ ತೋರಿಸಿ ಕೊಳ್ಳದೆ ಒಳಗೊಳಗೆ ಹಿಡಿಶಾಪ ಹಾಕಿಕೊಂಡು ಸುಮ್ಮನಾಗಿದ್ದರು.
ಬಸನಗೌಡ ಯತ್ನಾಳ್ ಮಾತ್ರ ಸುಮ್ಮನಾಗಲಿಲ್ಲ. ಅಧ್ಯಕ್ಷ ಸ್ಥಾನ ಸಿಗದಿದ್ದರೂ ವಿಧಾನ ಸಭೆಯಲ್ಲಿ ವಿರೋಧಪಕ್ಷದ ಸ್ಥಾನವಾದರೂ ಸಿಗುತ್ತದೆ ಎಂದು ನಂಬಿದ್ದರು. ಆದರೆ ಅದು ಕೂಡ ಸಿಗಲಿಲ್ಲ. ಆದರೆ ಅದಾಗಲೇ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ನಂಬಿದ್ದರು. ಆದರೆ ಕೊಟ್ಟಿರಲಿಲ್ಲ ಆ ಆಕ್ರೋಶವೂ ಅವರಲ್ಲಿ ಒಳಗೊಳಗೆ ಕುದಿಯುತ್ತಿತ್ತು.
ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವನಾಗಿದ್ದವನು ನನ್ನನ್ನು ರಾಜ್ಯ ಸಂಪುಟಕ್ಕೆ ಪರಿಗಣಿಸಿಲ್ಲ ಎಂಬ ಕೋಪವಂತು ಇದ್ದೇ ಇತ್ತು. ಹೀಗಾಗಿ ಆಗಾಗ್ಗೆ ಸಮಯ ಸಿಕ್ಕಾಗಲೆಲ್ಲ ತಮ್ಮದೇ ಪಕ್ಷದ ಬಗ್ಗೆ ಮಾತನಾಡ ತೊಡಗಿದ್ದರು.
2500 ಕೋಟಿ ಕೊಟ್ಟರೆ ಸಿಎಂ ಆಗಬಹುದು ಎಂಬ ಅವರ ಮಾತು ಅವತ್ತು ಕಾಂಗ್ರೆಸ್ ಗೆ ಅಸ್ತ್ರವಾಗಿ ಸಿಕ್ಕಿತ್ತು. ಇವತ್ತಿಗೂ ಕಾಂಗ್ರೆಸ್ ನವರು ಬಿಜೆಪಿಯನ್ನು ಟೀಕಿಸುವಾಗಲೆಲ್ಲ ಆ ಮಾತನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಸ್ವತಃ ಯತ್ನಾಳ್ ಅವರೇ ಹಲವು ಸಂದರ್ಭಗಳಲ್ಲಿ ಬಿಜೆಪಿ ನಾಯಕರನ್ನು ಮಾತಿನಲ್ಲಿಯೇ ಬೆತ್ತಲೆ ಮಾಡಿದ್ದಾರೆ. ಅದರಲ್ಲೂ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರನ್ನು ಸಮಯ ಸಿಕ್ಕಾಗಲೆಲ್ಲಾ ತೆಗಳುತ್ತಲೇ ಬಂದಿದ್ದಾರೆ.