ಬೆಂಗಳೂರು,ಫೆ.18- ಒಡೆದ ಮನೆಯಂತಾಗಿರುವ ರಾಜ್ಯ ಬಿಜೆಪಿಯಲ್ಲಿ ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಹಾಗೂ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿದೆ ಎನ್ನಲಾಗುತ್ತದೆ.
ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಿರುವುದು ಒಂದೆಡೆಯಾದರೆ, ಫೆ.20ರಂದು ಎಲ್ಲವೂ ಸರಿಯಾಗಲಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಯತ್ನಾಳ್ ಬಣ ಕೂಡ ರಣತಂತ್ರ ರೂಪಿಸುತ್ತಿದೆ.
ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಶಿಸ್ತು ಸಮಿತಿಯು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿತ್ತು. ಈ ಗಡುವು ಈಗಾಗಲೇ ಮುಗಿದಿದ್ದರೂ ಯತ್ನಾಳ್ ಡೋಂಟ್ ಕೇರ್ ಎಂದಿದ್ದಾರಂತೆ. ಈವರೆಗೆ ಅವರು ಈ ಶೋಕಾಸ್ ನೋಟಿಸ್‌ಗೆ ಯಾವುದೇ ಉತ್ತರ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 20ರಂದು ಎಲ್ಲವೂ ಸರಿಯಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಅಚ್ಚರಿ ವಿಚಾರವೆಂದರೆ ಫೆ.20ರಂದೇ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿಜಯೇಂದ್ರಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಯತ್ನಾಳ್ ಬಣ ಈಗಾಗಲೇ ರಾಜ್ಯದಲ್ಲೂ ಅಬ್ಬರಿಸಿ, ದೆಹಲಿಗೂ ಹೋಗಿ ವಿಜಯೇಂದ್ರ ವಿರುದ್ದ ತಂತ್ರ ಹೆಣೆದಿದೆ.
ಈಗ ಬೆಂಗಳೂರಿನಲ್ಲಿ ಫೆ.20ರಂದು ಮತ್ತೊಂದು ಸುತ್ತಿನ ಸಭೆ ಸೇರಲು ಯತ್ನಾಳ್ ಬಣ ಮುಂದಾಗಿದೆ ಎಂದು ತಿಳಿದುಬಂದಿದೆ. ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿದ ಬಳಿಕ ಮೌನವಾಗಿದ್ದ ಈ ಬಣ ಮತ್ತೆ ಸಕ್ರಿಯವಾಗಿದೆ. ಮತ್ತೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಒತ್ತಾಯಿಸಲು ಮುಂದಾಗಿದೆ. ಇದೇ ವಿಚಾರವಾಗಿ ಫೆ.20ರಂದು ಬೆಂಗಳೂರಿನಲ್ಲಿರುವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲೇ ಸಭೆ ಸೇರಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನೋಟಿಸ್‌ಗೆ ಉತ್ತರಿಸದಿರಲು ಯತ್ನಾಳ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದೇ ನಿಜವಾದರೆ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಕಳೆದ ಸೋಮವಾರ ಯತ್ನಾಳ್‌ಗೆ ಬಿಜೆಪಿ ಕೇಂದ್ರ ಬಿಜೆಪಿ ಚುನಾವಣಾ ಶಿಸ್ತು ಸಮಿತಿ ಕಾರ್ಯದರ್ಶಿ ಓಂಪಾಠಕ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಕೂಡಲೇ ಇದಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಆದರೆ ಇದಕ್ಕೆಲ್ಲ ಯತ್ನಾಳ್ ಕೇರೇ ಮಾಡುತ್ತಿಲ್ಲ, ಬದಲಿಗೆ ವಿಜಯೇಂದ್ರ ವಿರುದ್ಧ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಕೆಲವು ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವ ಯತ್ನಾಳ್ ಯಾವುದೋ ಭರವಸೆಯಲ್ಲಿದ್ದಾರೆ. ಹಾಗಾಗಿ ತಮ್ಮ ಬಣದೊಂದಿಗೆ ಮಹತ್ವದ ಸಭೆ ಸೇರುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಂಡರೆ, ಮುಂದಿನ ನಡೆ ಏನು? ಎಂಬ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.