ಬೆಂಗಳೂರು, ಜೂ.21- ಯೋಗವು ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅನುಕೂಲವಾಗಿದ್ದು, ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ತಿಳಿಸಿದರು.ಆಯುಷ್ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ 11ನೇ ಅಂತಾರಾಷ್ಟ್ರೀಯ ದಿನಾಚರಣೆಯನ್ನು ಔಷಧಿ ಸಸ್ಯಕ್ಕೆ ನೀರೆರುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಸ್ವಾಗತ ಕೋರಿದ ಅವರು, ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ಯೋಗಾಭ್ಯಾಸ ಮಾಡಿದರೆ ಒಳ್ಳೆಯದು. ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಯೋಗ ಸಹಕಾರಿಯಾಗಿದೆ. ಯೋಗ ಬಲವನಿಗೆ ರೋಗವಿಲ್ಲ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ರಾಷ್ಟ್ರಗಳು ಯೋಗವನ್ನು ಅಲವಡಿಸಿಕೊಂಡಿವೆ. 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರ ಯೋಗ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಅಭಿನಂದಿಸುತ್ತೇನೆ.
ಇಂದಿನಿಂದ ಯೋಗಾಭ್ಯಾಸ ಮಾಡುವುದಾಗಿ ತಿಳಿಸಿದರು. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟಿ ಮಾತನಾಡಿ, ಯೋಗಾಭ್ಯಾಸವನ್ನು ಮನೆಗಳಲ್ಲಿ ಅಭ್ಯಾಸ ಮಾಡಬೇಕು. ನಾನು ಶಿಕ್ಷಣ ಸಚಿವನಾಗಿದ್ದಾಗ ಮಕ್ಕಳಿಗೆ ಯೋಗಾಭ್ಯಾಸ ಕಡ್ಡಾಯ ಮಾಡಲಾಗಿತ್ತು. ಪ್ರಾಥಮಿಕ ಶಾಲೆಯಿಂದ 10ನೇ ತರಗತಿಯವರೆಗೆ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು.
ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡೋಣ ಎಂದರು. ಶಾಲಾ ಮಕ್ಕಳಿಗೆ ಯೋಗ ಕಲಿಸುವುದರಿಂದ ಒಳ್ಳೆಯದಾಗುತ್ತದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದು ಭರ್ತಿ ಮಾಡಬೇಕು. 29 ಸಾವಿರ ಶಿಕ್ಷಕರ ಕೊರತೆ ಇದ್ದು, ಕೆಲವು ಕಡೆ ಶಾಲೆಗಳಲ್ಲಿ ಮ ಕ್ಕಳ ಸಂಖ್ಯೆ ಕಡಿಮೆ ಇದೆ. ಈ ಸಂಬಂಧ ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ ಹಾಗೂ ಶಾಲೆಗಳಲ್ಲಿ ಯೋಗ ಕಡ್ಡಾಯ ಮಾಡುವ ಬಗ್ಗೆ ಸಿಎಂಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಮೈಸೂರಿಗೆ ಯೋಗ ಜಿಲ್ಲೆ ಗರಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮೈಸರನ್ನೂ ಯೋಗ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದಕ್ಕೆ ಚಿಂತನೆ ನಡೆಸಲಾಗಿದ್ದು, ಯೋಗಬಂಧುಗಳ ಸಹಕಾರ ಇದಕ್ಕೆ ಅಗತ್ಯವಿದೆ. ಯೋಗದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 5 ಸಾವಿರ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲೂ ನಡೆಸಲಾಗುತ್ತಿದೆ. ಯುವಕರ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಯೋಗ ತರಬೇತಿ ನೀಡಲಾಗುವುದು. ಹಸಿರು ಯೋಗ ಕಾರ್ಯಕ್ರಮದ ಮೂಲಕ ಅರಣ್ಯ ಇಲಾಖೆ ಜೊತೆಗೂಡಿ ಒಂದು ಲಕ್ಷ ಗಿಡಗಳನ್ನು ನೆಡಲಾಗುವುದು ಎಂದು ಹೇಳಿದರು.
ಜಿಲ್ಲಾ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗ ಮಂದಿರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರೋಗಿಗಳು ಮತ್ತು ಅವರೊಂದಿಗೆ ಬರುವವರಿಗೂ ಯೋಗದ ಪರಿಚಯ ಮಾಡಿಕೊಡಲಾಗುವುದು. ಯೋಗದಲ್ಲಿ ಹೆಚ್ಚು ಜನರು ಭಾಗಿಯಾಗಬೇಕು. ಆರೋಗ್ಯ ಇಲಾಖೆಯಿಂದ ಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಶಾಲೆ ಮಕ್ಕಳಿಗೆ ಯೋಗ ಕಲಿಸುವ ವಿಚಾರದಲ್ಲಿ ಶಿಕ್ಷಣ ಸಚಿವರೊಂದಿಗೆ ಮಾತನಾಡಲಾಗುವುದು ಎಂದರು. ರಾಜ್ಯಪಾಲರು, ಸಭಾಪತಿ, ಸಚಿವರು, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಯೋಗಾಸನ ಮಾಡುವ ಮೂಲಕ ಗಮನಸೆಳೆದರು.
- ಹಳದಿ ಮೆಟ್ರೋಗೆ ಚಾಲನೆ ನೀಡಿ ಪ್ರಧಾನಿ ಮೋದಿ ಭಾಷಣ, ಇಲ್ಲಿದೆ ಹೈಲೈಟ್ಸ್
- ಕಣ್ಮನ ಸೆಳೆಯುತ್ತಿದೆ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ, ಹೂವಿನ ಸೊಬಗು ಕಣ್ತುಂಬಿಕೊಂಡ ಜನರು
- ಧರ್ಮಸ್ಥಳದಲ್ಲಿ ಗಲಾಟೆ : ಆರು ಮಂದಿ ಅರೆಸ್ಟ್, ನಾಳೆಯಿಂದ ಮತ್ತೆ ಉತ್ಖನನ
- ಚುನಾವಣಾ ಆಯೋಗದ ವಿರುದ್ಧ ಅಬ್ಬರಿಸಿ ಸಾಕ್ಷಿ ನೀಡದೆ ಮೌನಕ್ಕೆ ಶರಣಾದ ಕಾಂಗ್ರೆಸ್ ನಾಯಕರು
- ಆಪರೇಷನ್ ಸಿಂಧೂರ್ ಮತ್ತು ಸೇನೆಯ ಪರಾಕ್ರಮವನ್ನು ಪ್ರಶ್ನಿಸಿ ಘನತೆ ಕೆಡಿಸಿಕೊಂಡ ರಾಹುಲ್ ಗಾಂಧಿ : ಕಿರಣ್ ರಿಜಿಜು