ಬೆಂಗಳೂರು, ಜೂ.21– ಅಂತಾರಾಷ್ಟ್ರೀಯ 10ನೇ ಯೋಗ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಪೂರ್ವ ದ್ವಾರದಲ್ಲಿ ಆಯೋಜಿಸಲಾಗಿದ್ದ ಯೋಗಾಭ್ಯಾಸದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭಾಗವಹಿಸಿದ್ದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಟ ಶರಣ್, ನಟಿ ಅನುಪ್ರಭಾಕರ್, ಕ್ರಿಕೆಟರ್ ಮನೀಷ್ ಪಾಂಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿ, ಐದು ಸಾವಿರ ವರ್ಷಗಳ ಇತಿಹಾಸ ಇರುವ ಯೋಗವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ನಮ ಧರ್ಮ, ಸಂಸ್ಕೃತಿ, ಪದ್ಧತಿಗೆ ಜಾಗತಿಕ ಮಾನ್ಯತೆ ದೊರೆತಿದೆ. ಹಿರಿಯರು ಮಹಾ ಋಷಿಗಳು ಯೋಗಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ. ಜಾತಿ ಧರ್ಮ, ಪ್ರದೇಶ ಮೀರಿ ಇಂದು ಯೋಗ ಬೆಳೆಯುತ್ತಿದೆ ಎಂದರು.
ನನಗೆ ಯೋಗ ಮಾಡಿ ಅಭ್ಯಾಸ ಇಲ್ಲ. ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೆ. ಈಗ ನಮ ಮನೆಯಲ್ಲಿ ಶ್ರೀಮತಿಯವರು ಯೋಗ ಅಭ್ಯಾಸ ಮಾಡುತ್ತಾರೆ. ಇನ್ನು ಮುಂದೆ ನಾನು ಯೋಗಾಭ್ಯಾಸ ಮಾಡುತ್ತೇನೆ. ಸಚಿವ ದಿನೇಶ್ ಒಬ್ಬ ಯೋಗ ಗುರುವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದರು.
ಇದು ನಮ ಆಸ್ತಿ, ಇದಕ್ಕೆ ಪ್ರೋತ್ಸಾಹ ನೀಡಬೇಕಿದೆ. 10 ದಿನಗಳ ಕಾಲ ಕ್ರೀಡಾಪಟುಗಳು ಹಾಗೂ ಸಿನಿಮಾ ನಟರನ್ನು ಕರೆಸಿ ಯೋಗಾಭ್ಯಾಸದ ಮೂಲಕ ಪ್ರೋತ್ಸಾಹ ನೀಡುತ್ತಿರುವ ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನಾರ್ಹ. ಎಲ್ಲರೂ ಹೆಚ್ಚು ಆರೋಗ್ಯವಂತರಾಗಿ, ಹೆಚ್ಚು ದಿನ ಬಾಳಿ ಎಂದು ಹಾರೈಸಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಯೋಗ ಅಗತ್ಯ ಇದೆ. ಯೋಗ ಕುರಿತು ಹೆಚ್ಚು ಪ್ರಚಾರ ಮಾಡಬೇಕಿದೆ. ಶಾಲಾ ಕಾಲೇಜುಗಳಲ್ಲಿ ಪ್ರತಿನಿತ್ಯ ಅಥವಾ ವಾರಕ್ಕೆ ಕೆಲ ತರಗತಿಗಳನ್ನು ಯೋಗ ಅಭ್ಯಾಸ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ.
ಆಯುಷ್ ಇಲಾಖೆಯಿಂದ ಇದಕ್ಕೆ ಹೊಸ ರೂಪ ಒದಗಿಸಿಕೊಡಲಾಗುತ್ತದೆ. ಹಿರಿಯರಾಗಿರಲಿ, ಕಿರಿಯರಾಗಿರಲಿ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಿ ಆರೋಗ್ಯದಿಂದ ಇರಲಿ ಎಂದರು.ಶರಣ್ ಮಾತನಾಡಿ, ಯೋಗ ದೈಹಿಕ ಆರೋಗ್ಯಕ್ಕಷ್ಟೆ ಅಲ್ಲ, ಮಾನಸಿಕವಾಗಿಯು ನಮನ್ನು ಸದೃಢವಾಗಿಸಿ, ಆರೋಗ್ಯಕರ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ದಿನ ನಿತ್ಯದ ಜೀವನದಲ್ಲಿ ಪ್ರತಿಯೊಬ್ಬರು ಕನಿಷ್ಠ ಅರ್ಧ ಅಥವಾ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಅನುಪ್ರಭಾಕರ್ ಮಾತನಾಡಿ, ಸಮಾಜದಲ್ಲಿ ಹೆಚ್ಚಿ ನ ಹಿಂಸೆ, ನೋವು, ಅಸೂಯೆ ಸೇರಿ ನಕಾರಾತಕ ಅಂಶಗಳನ್ನೇ ನೋಡುತ್ತಿದ್ದೇವೆ. ಯೋಗಾಭ್ಯಾಸದಿಂದ ದೇಹ ಸದೃಢವಾಗಿದ್ದರೆ ಮನಸ್ಸು ಸಕಾರಾತಕ ವಾಗಿರುತ್ತದೆ. ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು.
ನಾನು 25 ವರ್ಷಗಳಿಂದ ಯೋಗ ಮಾಡುತ್ತಿ ದ್ದೇನೆ. ಯೋಗಾಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ನಟ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಶರಣ್ ಹಾಗೂ ಅನುಪ್ರಭಾಕರ್ ಉತ್ತರಿಸದೇ ತೆರಳಿದರು.