ಬೆಂಗಳೂರು, ಆ.27- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈಗಲೂ ಅವಕಾಶವಿದೆ ಎಂದು ತಿಳಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1.58 ಕೋಟಿ ಕುಟುಂಬಗಳಿವೆ. ಅವುಗಳ ಪೈಕಿ 1.23 ಕೋಟಿ ಕುಟುಂಬದ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂ. ಪಾವತಿಸುವ ಗೃಹಲಕ್ಷ್ಮಿ ಯೋಜನೆ ಯನ್ನು ಜಾರಿಗೊಳಿಸಲಾಗಿದೆ ಎಂದರು.
ಇನ್ನು 27 ಲಕ್ಷ ಕುಟುಂಬಗಳು ಯೋಜನೆಯಿಂದ ಹೊರಗಿವೆ. ಬಹುತೇಕ ಅವರಲ್ಲಿ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರು ಇರಬಹುದು ಅಥವಾ ಯೋಜನೆಯ ಸೌಲಭ್ಯ ತಮಗೆ ಬೇಡ ಎಂದು ನಿರಾಕರಿಸಿರಲೂ ಬಹುದು ಎಂದು ಹೇಳಿದರು.
ಈಗಲೂ ವೆಬ್‌ಸೈಟ್ ಮುಕ್ತವಾಗಿದ್ದು, ಆದಾಯ ತೆರಿಗೆ ಜಿಎಸ್‌ಟಿ ಪಾವತಿ ಮಾಡದೇ ಇರುವವರು ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು. ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅರ್ಜಿಯೇ ಸ್ವೀಕಾರವಾಗುವುದಿಲ್ಲ.
ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ನಮೂದಿಸುತ್ತಿದ್ದಂತೆ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತವೆ. ಈ ಮೊದಲು ಈ ರೀತಿಯ 15 ಸಾವಿರ ಜನ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿದಾರರು ಅರ್ಜಿ ಸಲ್ಲಿಸಿದ್ದರು. ಅದನ್ನು ಆರಂಭದಲ್ಲೇ ಪೋರ್ಟಲ್ ತಿರಸ್ಕರಿಸಿದೆ ಎಂದು ಹೇಳಿದರು.
ಗೃಹಲಕ್ಷ್ಮಿಯರಿಗೆ ಜೂನ್ ತಿಂಗಳ ಕಂತನ್ನು ಪಾವತಿ ಮಾಡಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ವಾರದೊಳಗಾಗಿ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರ ಜೊತೆ ನಡೆಸಲಾಗಿದೆ. ಅರ್ಜಿ ಸಲ್ಲಿಸಿದವರ ಪೈಕಿ 80 ಸಾವಿರ ಜನರಿಗೆ ತಾಂತ್ರಿಕ ಕಾರಣಗಳಿಗಾಗಿ ಹಣ ತಲುಪುತ್ತಿರಲಿಲ್ಲ. ಅದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.