ಬೆಂಗಳೂರು,ಫೆ.23- ಪ್ರೀತ್ಸೆ… ಪ್ರೀತ್ಸೆ…ಅಂತ ಯುವತಿಯ ಹಿಂದೆ ಬಿದ್ದಿದ್ದ ಯುವಕನ ಪ್ರೀತಿಗೆ ನಿರಾಕರಿಸಿದ್ದಕ್ಕೆ ಆಕೆಯ ದ್ವಿಚಕ್ರ ವಾಹನ ಹಾಗೂ ಕಾರಿಗೆ ಬೆಂಕಿ ಹಚ್ಚಿರುವ ಘಟನೆಗಳು ಸಿಕೆ ಅಚ್ಚುಕಟ್ಟು ಹಾಗೂ ಸುಬ್ರಹಣ್ಯಪುರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿವೆ.
ಘಟನೆ ವಿವರ: ಬಿಕಾಂ ಓದುತ್ತಿದ್ದ ಯುವಕ ಪ್ರೀತಿ ಪ್ರೇಮಕ್ಕೆ ಒಳಗಾಗಿ ಯುವತಿಯೊಬ್ಬಳ ಹಿಂದೆ ಬಿದ್ದು ತನ್ನ ನಿವೇದನೆ ಯುವತಿಗೆ ತಿಳಿಸಿದ್ದು ಇದಕ್ಕೆ ಯುವತಿ ಒಲ್ಲೇ ಎಂದಿದ್ದಕ್ಕೆ ಉಚ್ಛನಂತಾದ ಯುವಕ ಸೇಡಿಗಾಗಿ ಯುವತಿಗೆ ನಗರದಲ್ಲಿ ಇದ್ದ ಎರಡು ಮನೆಗಳಿಗೆ ತೆರಳಿ ವಾಹನಗಳಿಗೆ ಬೆಂಕಿ ಹಚ್ಚಿ ದೃಷ್ಕೃತ್ಯ ಮೆರೆದಿದ್ದಾನೆ.
ರಾತ್ರಿ 12.30ರ ಸುಮಾರಿನಲ್ಲಿ ಇಬ್ಬರು ಸ್ನೇಹಿತರೊಂದಿಗೆ ದ್ವಿಕಚ್ರ ವಾಹನದಲ್ಲಿ ಸಿಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಪಾಪಯ್ಯ ಲೇಔಟ್‌ನ ಬನಗಿರಿ ಬಡಾವಣೆಯಲ್ಲಿರುವ ಯುವತಿಯ ನಿವಾಸಕ್ಕೆ ತೆರಳಿ ಮನೆಯ ಮುಂದೆ ನಿಲ್ಲಿಸಲಾಗಿದ್ದ ಒಂದು ಬೈಕ್ ಹಾಗೂ ಸ್ಕೂಟಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ನಂತರ ಅಲ್ಲಿಂದ ಸುಬ್ರಹಣ್ಯಪುರ ಠಾಣಾ ವ್ಯಾಪ್ತಿಯ ಅರೆಹಳ್ಳಿಯ ಬಳಿ ಇರುವ ಮತ್ತೊಂದು ಮನೆಗೆ 1.30 ರಸುಮಾರಿನಲ್ಲಿ ತೆರಳಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಒಂದು ಕಾರಿಗೆ ಬೆಂಕಿ ಹಚ್ಚಿದ್ದಾನೆ.
ಬೆಂಕಿಯ ಜ್ವಾಲೆ ಪಕ್ಕದ ಕಾರಿಗೂ ಆವರಿಸಿ ಸುಟ್ಟು ಕರಕಲಾಗಿವೆ ದಟ್ಟ ಹೊಗೆ ಹಾಗೂ ಬೆಂಕಿಯನ್ನು ಕಂಡ ಅಪಾರ್ಟ್‌ಮೆಂಟ್ ನಿವಾಸಿಗಳು ಕೂಡಲೇ ಪಾರ್ಕಿಂಗ್ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಎರಡು ಘಟನೆಗಳ ಬಗ್ಗೆ ಸಿಕೆ ಅಚ್ಚುಕಟ್ಟು ಹಾಗೂ ಸುಬ್ರಹಣ್ಯಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಯುವಕ ಹಾಗೂ ಆತನ ಸ್ನೇಹಿತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.