ಬೆಳಗಾವಿ,ಡಿ.11- ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆ ತಾಲೂಕಿನ ಹೊಸವಂಟಮುರಿ ಗ್ರಾಮದಲ್ಲಿ ಇಂದು ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಯುವತಿಯ ಮನೆಯವರು ಆಕೆಯ ಮದುವೆಯ ನಿಶ್ಚಿತಾರ್ಥ ಸಿದ್ಧತೆಯಲ್ಲಿದ್ದಾಗ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ ವಿವಸ್ತ್ರಗೊಳಿಸಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋದ ಕಾರಣ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಆತನ ತಾಯಿಯ ಮೇಲೆ ಹಲ್ಲೆ ಮಾಡಿ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಒಂದೇ ಗ್ರಾಮದ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು.
ಅಮೆರಿಕದ ಎಫ್-16 ಫೈಟರ್ ಜೆಟ್ ಪತನ, ಪೈಲಟ್ ಪಾರು
ನಿನ್ನೆ ರಾತ್ರಿ ಮನೆ ಬಿಟ್ಟು ಇವರಿಬ್ಬರು ಓಡಿಹೋಗಿದ್ದಾರೆ. ಆದರೆ ಇಂದು ಯುವತಿಯ ನಿಶ್ಚಿತಾರ್ಥ, ಮದುವೆ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಮಗಳು ಮನೆಬಿಟ್ಟು ಹೋಗಿರುವ ವಿಷಯ ತಿಳಿಯುತ್ತಿದ್ದಂತೆ ಏಕಾಏಕಿ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರಿಂದ ಯುವಕನ ಮನೆ ಮೇಲೆ ದಾಳಿ ನಡೆಸಿ ರಾತ್ರೋರಾತ್ರಿ ಮನೆಯನ್ನು ಸಂಪೂರ್ಣ ಧ್ವಂಸ ಮಾಡಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಬಳಿಕ ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ತಡರಾತ್ರಿ ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಏಳು ಮಂದಿ ಬಂಧನ:
ಪ್ರಕರಣ ಸಂಬಂಧ ಪೊಲೀಸರು 7 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಓಡಿ ಹೋಗಿರುವ ಯುವಕ-ಯುವತಿಯ ಶೋಧ ಕೈಗೊಂಡಿದ್ದಾರೆ. ಸ್ಥಳದಲ್ಲಿ ಪೊಲೀಸ್ ಪಡೆ: ಗ್ರಾಮದಲ್ಲಿ ಬಿಗುವಿನ ವಾತಾವರ ಉಂಟಾದ ಹಿನ್ನಲೆಯಲ್ಲಿ ನಾಗರಿಕ ಹಾಗೂ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಕಾರಿ ಹಾಗೂ ಪೊಲೀಸ್ ಆಯುಕ್ತರು ಭೇಟಿ ನೀಡಿದ್ದರು.
ಪರಿಶೀಲನೆ ನಡೆಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್
ಚಳಿಗಾಲದ ಅಧಿವೇಶನಕ್ಕಾಗಿ ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಇರುವಾಗ, ಅದೇ ಬೆಳಗಾವಿಯಲ್ಲಿ ಘನಘೋರ, ಅಮಾನವೀಯ ಇಡೀ ಮನುಕುಲವೇ ತಲೆ ತಗ್ಗಿಸುವಂಥಾ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕಪಕ್ಕದ ಮನೆಯವರಿಂದ ಮಾಹಿತಿ ಪಡೆದಿದ್ದಾರೆ.
ಮಗ ತಾನು ಪ್ರೀತಿಸಿದ ಯುವತಿ ಜೊತೆ ರಾತ್ರೋ ರಾತ್ರಿ ಓಡಿ ಹೋದ ಎಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ 7 ಜನರನ್ನು ಬಂಧಿಸಲಾಗಿದ್ದು ವಿಚಾರ ತಿಳಿಯುತ್ತಿದ್ದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಬೆಳಗಾವಿಗೆ ಭೇಟಿ ನೀಡಿದ್ದು ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಕಮಲವ್ವಳ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ಪರಮೇಶ್ವರ್, ನಿನ್ನೆ ರಾತ್ರಿ 12.30ರ ಸುಮಾರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ದುಂಡಪ್ಪ ಎಂಬ 24 ವರ್ಷದ ಯುವಕ 18 ವರ್ಷದ ಯುವತಿಯನ್ನು ಕರೆದುಕೊಂಡು ಓಡಿ ಹೋಗಿದ್ದಾರೆ. ಬಳಿಕ ಸಂಬಂಧಿಕರು 10-15 ಜನ ಮನೆಗೆ ಹೋಗಿ ಧ್ವಂಸ ಮಾಡಿದ್ದಾರೆ. ಮಹಿಳೆಯನ್ನು ಬೆತ್ತೆಲೆ ಮಾಡಿ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣರಾದ 7 ಜನರನ್ನು ಬಂಧಿಸಲಾಗಿದೆ. ಇದು ಬಹಳ ಅನಿರೀಕ್ಷಿತ ಘಟನೆ ಎಂದು ಮಾಹಿತಿ ನೀಡಿದರು.