Wednesday, July 16, 2025
Homeಬೆಂಗಳೂರುಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದಂತೆ ಕುಸಿದು ಬಿದ್ದು ಪ್ರಾಣಬಿಟ್ಟ ಯುವಕ

ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದಂತೆ ಕುಸಿದು ಬಿದ್ದು ಪ್ರಾಣಬಿಟ್ಟ ಯುವಕ

Youth collapses and dies on way home after party

ಬೆಂಗಳೂರು,ಜು.16- ಸ್ನೇಹಿತರೊಂದಿಗೆ ಸೇರಿ ಪಾರ್ಟಿ ಮಾಡಿ ಮನೆಯಿಂದ ಹೊರಗೆ ಬರುತ್ತಿದ್ದಂತೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಹನುಮಂತನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಕಾಳಿದಾಸ ಲೇಔಟ್‌ ನಿವಾಸಿ ರಾಮು(24) ಮೃತಪಟ್ಟ ಯುವಕ. ಈತ ಪೋರ್ಟಲ್‌ ವೃತ್ತಿ ಮಾಡುತ್ತಿದ್ದು, ಮೂಲತಃ ನಾಗಮಂಗಲದವರು.

ಜವರಪ್ಪ ಎಂಬುವರ ಮನೆಯಲ್ಲಿ ಆಗಾಗ್ಗೆ ಸ್ನೇಹಿತರೊಂದಿಗೆ ಸೇರಿಕೊಂಡು ರಾಮು ಪಾರ್ಟಿ ಮಾಡುತ್ತಿದ್ದನು. ಅದೇ ರೀತಿ ನಿನ್ನೆ ರಾತ್ರಿ ಸ್ನೇಹಿತ ಪ್ರಮೋದ್‌ ಸೇರಿದಂತೆ ನಾಲ್ವರ ಜೊತೆ ಪಾರ್ಟಿ ಮಾಡಲು ಇಲ್ಲಿಗೆ ಬಂದಿದ್ದಾರೆ.

ಪಾರ್ಟಿ ಮುಗಿಸಿಕೊಂಡು ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಜವರಪ್ಪ ಅವರ ಮನೆಯಿಂದ ಹೊರಗೆ ಬರುತ್ತಿದ್ದಂತೆ ಕುಸಿದುಬಿದ್ದಿದ್ದಾನೆ. ತಕ್ಷಣ ಸ್ನೇಹಿತರು ಗಮನಿಸಿ ಆತನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹನುಮಂತನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಅತಿಯಾದ ಮದ್ಯ ಸೇವನೆಯಿಂದಾಗಿದೆಯೋ ಅಥವಾ ಹೃದಯಾಘಾತವೋ, ಇಲ್ಲವೇ ಸ್ನೇಹಿತರ ಮಧ್ಯೆ ಏನಾದರೂ ಗಲಾಟೆಯಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.ಸಾವು ಯಾವ ಕಾರಣಕ್ಕೆ ಆಗಿದೆ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದಷ್ಟೇ ಗೊತ್ತಾಗಬೇಕಿದೆ.

RELATED ARTICLES

Latest News