ಬೆಂಗಳೂರು, ಮಾ.13- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ನಕಲಿ ಟಿಕೆಟ್ ತೋರಿಸಿ ಪ್ರವೇಶಿಸಿದ್ದ ಯುವಕ ವಿಮಾನ ನಿಲ್ದಾಣದ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.ಜಾರ್ಖಂಡ್ ಮೂಲದ ಪ್ರಖರ್ ಶ್ರೀವಾಸ್ತವ್(24) ಖಾಕಿ ಬಲೆಗೆ ಬಿದ್ದ ಯುವಕ.ತನ್ನ ಸ್ನೇಹಿತೆಯನ್ನು ದೆಹಲಿಗೆ ವಿಮಾನದಲ್ಲಿ ಕಳುಹಿಸುವ ಸಲುವಾಗಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಲು ನಕಲಿ ಟಿಕೆಟ್ ತಯಾರಿಸಿಕೊಂಡು ಬಂದಿದ್ದಾನೆ.
ಪ್ರವೇಶದ್ವಾರದ ಬಳಿ ಆ ಟಿಕೆಟ್ ತೋರಿಸಿ ನಿಲ್ದಾಣದೊಳಗೆ ಸ್ನೇಹಿತೆ ಜೊತೆ ಹೋಗಿದ್ದಾನೆ.ಸ್ನೇಹಿತೆಯನ್ನು ಕಳುಹಿಸಿ ವಾಪಸ್ ಗೇಟ್-9ರ ಬಳಿ ಹೊರಗೆ ತೆರಳಲು ಬಂದಾಗ ಅನುಮಾನಗೊಂಡ ಸಿಬ್ಬಂದಿ ಪ್ರಶ್ನಿಸಿದಾಗ ನನಗೆ ತುರ್ತಾಗಿ ಕರೆಬಂದಿದೆ, ಹಾಗಾಗಿ ವಾಪಸ್ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಈತನ ವರ್ತನೆಯಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಮತ್ತೊಮ್ಮೆ ಪ್ರಯಾಣದ ಟಿಕೆಟ್ ಪರಿಶೀಲಿಸಿದಾಗ ಅದು ನಕಲಿ ಟಿಕೆಟ್ ಎಂಬುವುದು ಗೊತ್ತಾಗಿದೆ.
ತಕ್ಷಣ ಪ್ರಖರ್ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಸ್ನೇಹಿತೆಗೆ ಬೈ-ಬೈ ಹೇಳಲು ನಕಲಿ ಟಿಕೆಟ್ ಮಾಡಿಸಿಕೊಂಡು ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದಾಗಿ ಹೇಳಿದ್ದಾನೆ.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಈತನ ವಿರುದ್ಧ ನಕಲಿ ಟಿಕೆಟ್, ಅತಿಕ್ರಮಣ ಪ್ರವೇಶ ಮತ್ತು ವಂಚನೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದು 2ನೇ ಪ್ರಕರಣ:
ವಿಮಾನ ನಿಲ್ದಾಣದಲ್ಲಿ ಈ ರೀತಿ ಅತಿಕ್ರಮಣವಾಗಿ ಪ್ರವೇಶ ಮಾಡಿರುವುದು ಇದು 2ನೇ ಪ್ರಕರಣವಾಗಿದೆ. ಕಳೆದ ನವೆಂಬರ್ನಲ್ಲಿ ಜಾರ್ಖಂಡ್ ಮೂಲದ ಹರ್ಪ್ರೀತ್ ಕೌರ್ ಸೈನಿ(26) ಎಂಬ ಟೆಕ್ಕಿ ಟಿಕೆಟ್ ಇಲ್ಲದೆ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದಾಗ ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು.