ಬೆಂಗಳೂರು, ಆ.25- ಸೌಜನ್ಯ ಪ್ರಕರಣದಲ್ಲಿ ಪ್ರಚೋದನಕಾರಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್‌ನನ್ನು ಎರಡನೇ ದಿನವೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದು, ಆತ ವಿಡಿಯೋ ಮಾಡಲು ಬಳಸಿದ್ದ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಡಿಜಿಟಲ್ ಸಲಕರಣೆಗಳನ್ನು ಜಪ್ತಿ ಮಾಡುವ ಸಾಧ್ಯತೆಯಿದೆ.
ನಿನ್ನೆ ಬೆಳ್ತಂಗಡಿಯ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ ಖದ್ರಿ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5.30ರ ವರೆಗೂ ನಿರಂತರ ವಾಗಿ ವಿಚಾರಣೆ ನಡೆಸಿದ್ದರು. ಸಮೀರ್ ನೀಡಿದ ಅಷ್ಟು ದಾಖಲೆಗಳನ್ನು ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದರು. ಇಂದು ಬೆಳಗ್ಗೆ ಮತ್ತೆ ಸಮೀರ್ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಹಾಗಾಗಿ ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದಾನೆ.
ಇಂದು ಡಿಜಿಟಲ್ ಸಲಕರಣೆಗಳನ್ನು ಜಪ್ತಿ ಮಾಡಲು ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಸಮೀರ್ ಈಗಾಗಲೇ ಒಂದು ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು, ವಿಚಾರಣೆಯ ವೇಳೆ ಹೆಚ್ಚುವರಿ ಸಾಕ್ಷಿಗಳು ಲಭ್ಯವಾದರೆ ಬೇರೊಂದು ಪ್ರಕರಣದಲ್ಲಿ ಬಂಧನಕ್ಕೊಳಪಡಿಸುವ ನಿಟ್ಟಿನಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ.
ಸಮೀರ್ ವಿಚಾರಣೆಯ ವೇಳೆ ವಿಡಿಯೋ ಮಾಡಿದ್ದ ಉದ್ದೇಶ ಮತ್ತು ಅದಕ್ಕಾಗಿ ಮಾಹಿತಿ ಸಂಗ್ರಹಿಸಿದ ಮೂಲಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸೌಜನ್ಯ ಪ್ರಕರಣದಲ್ಲಿ ವಿಡಿಯೋ ಮಾಡಲು ಯಾವ ಮೂಲದಿಂದ ಮಾಹಿತಿ ಕಲೆ ಹಾಕಲಾಗಿದೆ. ಅನನ್ಯಭಟ್ ಪ್ರಕರಣದಲ್ಲೂ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಲಾಗಿದೆ. ಅದಕ್ಕಾಗಿ ಯಾವ ಮೂಲದಿಂದ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ವಿವರ ಪಡೆದುಕೊಂಡಿದ್ದಾರೆ.
ವಿಡಿಯೋಗಳಲ್ಲಿ ಸಮೀರ್ ಎಐ ತಂತ್ರಜ್ಞಾನ ಬಳಸಿ ಕಾಲ್ಪನಿಕ ಫೋಟೊ ಮತ್ತು ವಿಡಿಯೋಗಳನ್ನು ತಯಾರಿಸಿದ್ದ, ಅವುಗಳನ್ನು ಬಳಸಿ ಸಾಕಷ್ಟು ವಿವರಣೆ ನೀಡುವ ಮೂಲಕ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಹಾಗೂ ತಪ್ಪು ಮಾಹಿತಿ ಹರಡಿದ್ದ ಎಂದು ದೂರುಗಳಿವೆ.
ಸಮೀರ್ ವಿಡಿಯೋದಲ್ಲಿ ಹಿಂಸೆಗೆ ಪ್ರಚೋದನೆ ನೀಡಿರುವ ಅಂಶಗಳಿವೆ ಇದರಿಂದಾಗಿ ಉಜಿರೆಯ ಬಳಿ ಗಲಭೆಗಳಾಗಿ ಖಾಸಗಿ ಚಾನಲ್‌ನ ವರದಿಗಾರನ ಮೇಲೆ ಹಲ್ಲೆಯಾಗಿದೆ ಎಂಬ ಆರೋಪಗಳಿವೆ.
ಪೊಲೀಸರು ಸಮೀರ್ ವಿಡಿಯೋ ಮಾಡಲು ಸಂಗ್ರಹಿಸಿದ ಮೂಲಗಳ ಬೆನ್ನು ಹತ್ತಿದ್ದಾರೆ. ವಿಡಿಯೋ ಮತ್ತು ಧರ್ಮಸ್ಥಳದ ವಿರುದ್ಧ ಅಪಪ್ರಚಾರದಲ್ಲಿ ಭಾರೀ ಷಡ್ಯಂತ್ರ ಅಡಗಿದೆ ಎಂಬ ಅನುಮಾನಗಳಿವೆ. ಈ ಅನುಮಾನಗಳ ಜಾಡು ಹಿಡಿದು ತನಿಖೆ ಮುಂದುವರೆದಿದ್ದು, ಸಮೀರ್‌ಗೆ ಯಾರೆಲ್ಲಾ ಸಂಪರ್ಕವಿತ್ತು, ಹಣಕಾಸಿನ ಮೂಲಗಳೇನು ಎಂದು ಪ್ರಶ್ನಿಸಲಾಗಿದೆ.
ಪೊಲೀಸರ ಎಲ್ಲಾ ಪ್ರಶ್ನೆಗಳಿಗೆ ಸಮೀರ್ ಸಮರ್ಪಕವಾಗಿ ಉತ್ತರಿಸದಿದ್ದರೆ, ಬಂಧನಕ್ಕೊಳಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.