ಬೆಂಗಳೂರು,ಜ.12- ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚಖಾತ್ರಿ ಯೋಜನೆಗಳ ಪೈಕಿ ಕೊನೆಯದಾದ ಯುವನಿಧಿಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಸ್ವಾಮಿ ವಿವೇಕಾನಂದರ 161 ನೇ ಜಯಂತಿ ಪ್ರಯುಕ್ತ ಶಿವಮೊಗ್ಗದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು. ಈ ಮೂಲಕ ವಿಧಾನಸಭೆ ಚುನಾವಣೆಗೂ ಮೊದಲು ನೀಡಿದ್ದ ಪ್ರಮುಖ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
ಈ ಮೊದಲು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿತ್ತು. ಪದವಿ ಅಥವಾ ಡಿಫ್ಲೋಮಾ ಪಡೆದ ಬಳಿಕ 6 ತಿಂಗಳವರೆಗೂ ಉದ್ಯೋಗ ದೊರೆಯದೇ ಇದ್ದವರಿಗೆ 2 ವರ್ಷಗಳ ಕಾಲ ನಿರುದ್ಯೋಗ ಭತ್ಯೆ ನೀಡುವುದು ಯುವನಿ ಯೋಜನೆಯ ಮುಖ್ಯ ಉದ್ದೇಶ.
ಪದವಿಧರರಿಗೆ 3,000, ಡಿಫ್ಲೋಮಾದಾರರಿಗೆ 1,500 ರೂ. ಭತ್ಯೆ ನೀಡುವುದಾಗಿ ಚುನಾವಣೆಗೂ ಮೊದಲೇ ಘೋಷಣೆ ಮಾಡಲಾಗಿತ್ತು.
ಅದರ ಪ್ರಕಾರ ಸರ್ಕಾರ ರಚನೆಯಾದ 7 ತಿಂಗಳು ಕಳೆದ ಬಳಿಕ ಮತ್ತು ಪದವಿ, ಡಿಫ್ಲೋಮಾ ಪರೀಕ್ಷೆಗಳು ಮುಗಿದ 6 ತಿಂಗಳ ನಂತರ ಯೋಜನೆ ಜಾರಿಗೆ ಚಾಲನೆ ನೀಡಲಾಗಿದೆ. ಕಳೆದ ಡಿಸೆಂಬರ್ 26 ರಂದು ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಲಾಯಿತು. ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ 5.29 ಲಕ್ಷ ಮಂದಿ ಪದವಿ ಹಾಗೂ ಡಿಫ್ಲೋಮಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಅವರಲ್ಲಿ ನಿರುದ್ಯೋಗಿಗಳಾಗಿರುವವರು ಯುವನಿಧಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರು.ನಿನ್ನೆಯವರೆಗೂ ಸುಮಾರು 66 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಒಟ್ಟು ಫಲಾನುಭವಿಗಳ ಪೈಕಿ ಶೇ.12 ರಷ್ಟು ಮಾತ್ರ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನುಳಿದಂತೆ ಪದವೀಧರರಲ್ಲಿ ಯುವನಿಧಿ ಯೋಜನೆ ಬಗ್ಗೆ ನಿರಾಸಕ್ತಿ ಅಥವಾ ಉದ್ಯೋಗ ದೊರೆತಿರುವ ಸಾಧ್ಯತೆಗಳಿವೆ.
ಯುವನಿಧಿ ಯೋಜನೆಯ ಚಾಲನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಶಿವಮೊಗ್ಗದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 1 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಸಮಾವೇಶಗೊಳಿಸುವ ನಿಟ್ಟಿನಲ್ಲಿ ತಯಾರಿಗಳಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಸಂಚಾರದಟ್ಟಣೆ ಮತ್ತು ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಕಿರಿಕಿರಿಯನ್ನು ತಪ್ಪಿಸಲು ಶಾಲಾ-ಕಾಲೇಜುಗಳ ಸಮಯವನ್ನು 9 ರಿಂದ 4 ಗಂಟೆಯವರೆಗೂ ಬದಲಾವಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳಲು ಅಡ್ಡಿಯಿಲ್ಲದಂತೆ ಪಂಚಖಾತ್ರಿಗಳನ್ನು ಜಾರಿಗೊಳಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಪಂಚಖಾತ್ರಿಗಳು ಪ್ರಮುಖ ಪಾತ್ರ ವಹಿಸಿದ್ದವು ಎಂಬ ವಿಶ್ಲೇಷಣೆಯಿದೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್‍ನ ಭರವಸೆಗಳ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸುವುದು ಅಸಾಧ್ಯ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ಸರ್ಕಾರವನ್ನು ಟೀಕಿಸಿ ಪಂಚಖಾತ್ರಿ ಯೋಜನೆಗಳ ಜಾರಿಯಿಂದ ಆರ್ಥಿಕ ಆರೋಗ್ಯ ಹದಗೆಡಲಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯು ಕಾಂಗ್ರೆಸ್‍ನ ಗ್ಯಾರಂಟಿಗಳನ್ನು ಆರಂಭದಲ್ಲಿ ಟೀಕಿಸಿತ್ತು. ಅನಂತರ ಸಮರ್ಪಕ ಅನುಷ್ಠಾನ ಮಾಡಲಾಗುತ್ತಿಲ್ಲ ಎಂಬ ಆರೋಪ ಮಾಡಲಾರಂಭಿಸಿತ್ತು. ಪಂಚಖಾತ್ರಿ ಯೋಜನೆಗಳ ಬಗ್ಗೆ ಜನರ ಒಲವು ಹೆಚ್ಚಾಗುತ್ತಿದ್ದಂತೆ ಯೂಟರ್ನ್ ಪಡೆದ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಮೋದಿ ಗ್ಯಾರಂಟಿ ಎಂದು ಬಿಂಬಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಕಾಂಗ್ರೆಸಿಗರು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ವಿರುದ್ಧ ವಿಡಂಬನಾತ್ಮಕ ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ.